ADVERTISEMENT

ಮೈಸೂರು: ಕ್ರಿಸ್‌ಮಸ್‌ ಸಂಭ್ರಮಕ್ಕೆ ನಗರ ಸಜ್ಜು

ದೀಪಾಲಂಕಾರದಲ್ಲಿ ಮಿನುಗುತ್ತಿವೆ ಚರ್ಚ್‌; ಇಂದು ಮಧ್ಯರಾತ್ರಿಯಿಂದಲೇ ವಿಶೇಷ ಪೂಜೆ

ಎಚ್‌.ಕೆ. ಸುಧೀರ್‌ಕುಮಾರ್
Published 24 ಡಿಸೆಂಬರ್ 2024, 5:15 IST
Last Updated 24 ಡಿಸೆಂಬರ್ 2024, 5:15 IST
ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್‌ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾಗಿದೆ– ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌
ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್‌ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾಗಿದೆ– ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌   

ಮೈಸೂರು: ಕ್ರಿಸ್‌ಮಸ್‌ ಹಬ್ಬಕ್ಕೆ ನಗರ ಸಜ್ಜಾಗಿದ್ದು, ಚರ್ಚ್‌ಗಳು ದೀಪಾಲಂಕಾರದಲ್ಲಿ ಮಿನುಗುತ್ತಿವೆ. ಕ್ರೈಸ್ತರ ಮನೆಗಳಲ್ಲಿ ಸಡಗರ ಮನೆ ಮಾಡಿದೆ.

ಬುಧವಾರ ಹಬ್ಬದ ಆಚರಣೆ ನಡೆಯಲಿದ್ದು, ಮಂಗಳವಾರ (ಡಿ.24) ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯರಾತ್ರಿಯೇ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಲಿದ್ದು, ಬಿಷಪ್‌ ಅವರಿಂದ ಸಂದೇಶವಿರುತ್ತದೆ. ಹಬ್ಬದ ಕಾರಣ ಚರ್ಚ್‌ಗಳ ಆವರಣದಲ್ಲಿ ‘ಗೋದಲಿ’ (ಕ್ರಿಬ್‌) ಮಾದರಿಗಳು ಗಮನಸೆಳೆಯುತ್ತಿವೆ.

‘ಸರಳತೆ, ಮೌಲ್ಯ, ಪ್ರಾರ್ಥನೆ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಮತ್ತು ಶಾಂತಿಯ ಸಂದೇಶದ ನಕ್ಷತ್ರವು ಪ್ರತಿಯೊಬ್ಬರ ಮನದಲ್ಲೂ ಮಿನುಗಲಿ’ ಎಂಬ ಆಶಯದ ಈ ಹಬ್ಬದ ಆಚರಣೆಗೆ ನಗರದಲ್ಲಿ ವಿಶೇಷ ಮಹತ್ವವಿದೆ. ಇಲ್ಲಿನ ಸೇಂಟ್ ಫಿಲೋಮಿನಾ ಸೇರಿದಂತೆ ಹಲವು ಚರ್ಚ್‌ಗಳು ಪಾರಂಪರಿಕ ಕಟ್ಟಡಗಳು ಎನಿಸಿಕೊಂಡಿರುವುದು ಇದಕ್ಕೆ ಕಾರಣ. ಹೀಗಾಗಿ, ಇಲ್ಲಿಗೆ ನೆರೆಯ ಜಿಲ್ಲೆಗಳು ಹಾಗೂ ರಾಜ್ಯಗಳಿಂದಲೂ ಜನರು ನೆಂಟರಿಷ್ಟರ ಮನೆಗಳಿಗೆ ಬಂದು ಕ್ರಿಸ್‌ಮಸ್‌ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

ADVERTISEMENT

ನಗರದ ವಿವಿಧೆಡೆ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿರುವ ಚರ್ಚ್‌ಗಳು ಅಲಂಕೃತಗೊಂಡಿವೆ. ನಕ್ಷತ್ರಬುಟ್ಟಿಗಳು ಅವುಗಳಿಗೆ ಮೆರುಗು ನೀಡುತ್ತಿವೆ.

ಪ್ರಮುಖ ಚರ್ಚ್‌ಗಳಾದ ಕೆ.ಆರ್. ನಗರದ ಅಂಥೋನಿ ಚರ್ಚ್, ಬೆಂಗಳೂರು ನೀಲಗಿರಿ ರಸ್ತೆಯ ವೆಸ್ಲಿ ಕ್ಯಾಥೆಡ್ರಲ್, ಸೇಂಟ್ ಬಾರ್ಥಲೋಮಿಯಸ್ ಕ್ಯಾಥೆಡ್ರಲ್, ವಿಜಯನಗರದ 4ನೇ ಹಂತದ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಾರ್ಡ್ವಿಕ್ ಚರ್ಚ್‌ಗಳಲ್ಲಿ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದೆ. ‘ಸೃಷ್ಟಿ ಮತ್ತು ನವೀಕರಿಸಿದ ಸೃಷ್ಟಿ’ ಎಂಬ ಥೀಮ್‌ನಲ್ಲಿ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಗೋದಲಿ ನಿರ್ಮಾಣ ತಯಾರಿ ನಡೆದಿದೆ.

ರಂಗೋಲಿಯಲ್ಲಿ ಯೇಸು ಕ್ರಿಸ್ತ: ‘ಕಲಾವಿದ ಪುನೀತ್‌ ಅವರಿಂದ ಸೇಂಟ್‌ ಫಿಲೋಮಿನಾ ಚರ್ಚ್‌ ಆವರಣದಲ್ಲಿ 5ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ರಂಗೋಲಿಯಲ್ಲಿ ರಚಿಸುತ್ತಿರುವುದು ಈ ಬಾರಿಯ ವಿಶೇಷ. ಅಲ್ಲದೇ, ಕ್ರಿಸ್ತ ಜನಿಸಿ ಇಂದಿಗೆ 2025 ವರ್ಷಗಳಾಗಿದ್ದು, ಚರ್ಚ್‌ನಲ್ಲಿ ಡಿ.29ರಂದು ಜ್ಯೂಬಿಲಿ 2025’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಚರ್ಚ್‌ನ ಫಾದರ್‌ ಪೀಟರ್‌ ತಿಳಿಸಿದರು.

ವ್ಯಾಪಾರ ಜೋರು: ‌ಹಬ್ಬದ ಅಂಗವಾಗಿ ಶಿವರಾಂ ಪೇಟೆಯ ಮನ್ನಾರ್ಸ್‌, ದೇವರಾಜ ಮಾರುಕಟ್ಟೆ, ದೇವರಾಜ ಅರಸು ರಸ್ತೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು. ಬೊಂಬೆಗಳು, ಜಿಂಗಲ್ ಬೆಲ್ಸ್, ಸಾಂತಾ ಕ್ಲಾಸ್ ಕಟೌಟ್‌ಗಳು, ಕ್ರಿಸ್‌ಮಸ್‌ ಸ್ಟಾರ್, ವಿವಿಧ ಬಣ್ಣದ ಆಕಾರದ ದೀಪಗಳು, ಕ್ಯಾಂಡಲ್‌ಗಳು ಮಾರಾಟವಾದವು.

‘ನವೆಂಬರ್‌ ಆರಂಭದಿಂದಲೇ ಕ್ರಿಸ್‌ಮಸ್‌ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರು, ಮುಂಬೈ, ಗುಜರಾತ್‌ಗಳಿಂದಲೂ ಆಲಂಕಾರಿಕ ವಸ್ತುಗಳನ್ನು ತರಿಸಿದ್ದೇವೆ. ಈ ಬಾರಿ ದರದಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಕಳೆದ ಬಾರಿಯಷ್ಟೇ ಇದೆ’ ಎಂದು ಶಿವರಾಂ ಪೇಟೆಯ ಮಾರುತಿ ಭಂಡಾರ್‌ನ ಮೊಹಮ್ಮದ್‌ ಕೈಫ್‌ ತಿಳಿಸಿದರು.

ಲೂರ್ದ್‌ ನಗರ, ಗಾಂಧಿನಗರ, ಶ್ರೀರಾಂಪುರ, ವಿಜಯನಗರ, ಜೆ.ಪಿ.ನಗರ, ಲಷ್ಕರ್ ಮೊಹಲ್ಲಾ, ಬೃಂದಾವನ ಬಡಾವಣೆ, ಗೋಕುಲಂ, ಅಶೋಕಪುರಂ, ವಿಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಮಾರುಕಟ್ಟೆಗೆ ಕುಟುಂಬದೊಂದಿಗೆ ಆಗಮಿಸುತ್ತಿರುವ ಸಮುದಾಯದ ಗ್ರಾಹಕರು ಹಬ್ಬದ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.

ಮೈಸೂರಿನ ಶಿವರಾಂಪೇಟೆಯಲ್ಲಿ ಕ್ರಿಸ್‌ಮಸ್‌ ಹಬ್ಬದ ವ್ಯಾಪಾರದಲ್ಲಿ ನಿರತರಾಗಿರುವ ಗ್ರಾಹಕರು
ಚರ್ಚ್‌; ವಿಶೇಷ ಪ್ರಾರ್ಥನೆ, ಪೂಜೆಗೆ ಸಿದ್ಧ ಸಮುದಾಯದಲ್ಲಿ ಗರಿಗೆದರಿದ ಸಂಭ್ರಮ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
ಸ್ನೇಹಿತರಿಗೆ ಕ್ರಿಸ್‌ಮಸ್‌ ಉಡುಗೊರೆ ನೀಡಲು ಮಾರುಕಟ್ಟೆಗೆ ಬಂದಿದ್ದೆ. ಹಬ್ಬಕ್ಕೆಂದು ಬಂದಿರುವ ಆಲಂಕಾರಿಕ ವಸ್ತುಗಳನ್ನು ನೋಡುವುದೇ ಒಂದು ಸಂಭ್ರಮ
ಪ್ರಿಯಾ ಈಶ್ವರ್‌ನಗರ
ಇಂದು ರಾತ್ರಿಯಿಂದ ಪೂಜೆ ಆರಂಭ
ಕ್ಯಾಥೋಲಿಕ್‌ ಪ್ರಧಾನ ಚರ್ಚ್ ಸೇಂಟ್‌ ಫಿಲೋಮಿನಾದಲ್ಲಿ ಡಿ.24ರಂದು ರಾತ್ರಿ 11.30ಕ್ಕೆ ಕ್ರಿಸ್‌ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಜಾಗರಣೆ ಕ್ರಿಸ್‌ಮಸ್‌ ಬಲಿಪೂಜೆ ನೆರವೇರಲಿದೆ. ಸರಿಯಾಗಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ‘ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್‌ ಮೋರಸ್‌ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಡಿ.25ರಂದು ಬೆಳಿಗ್ಗೆ 5ರಿಂದ 9ರವರೆಗೆ ಪ್ರಮುಖ ಪ್ರಾರ್ಥನೆಯು ತಮಿಳು ಕನ್ನಡ ಇಂಗ್ಲಿಷ್‌ ಭಾಷೆಯಲ್ಲಿ ನಡೆಯಲಿದೆ. 4 ದಿವ್ಯ ಬಲಿಪೂಜೆಗಳು ನೆರವೇರಲಿದ್ದು ಸಂಜೆ 6ಕ್ಕೂ ಪೂಜೆ ನಡೆಯಲಿದೆ. ಬಳಿಕ ಸಾರ್ವಜನಿಕರಿಗೆ ಚರ್ಚ್‌ ಪ್ರವೇಶ ನೀಡಲಾಗುತ್ತದೆ’ ಎಂದು ಚರ್ಚ್‌ನ ಫಾದರ್‌ ಪೀಟರ್‌ ತಿಳಿಸಿದರು. ‘ಪ್ರೊಟೆಸ್ಟೆಂಟ್‌ ಚರ್ಚ್‌ಗಳಲ್ಲಿ ಇಂದು 6ರಿಂದ 8 ದೀಪಾರಾಧನೆ ಡಿ.25ರಂದು ಬೆಳಿಗ್ಗೆ 8.30 10.30ರವರೆಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿದೆ’ ಎಂದು ರಾಮಕೃಷ್ಣನಗರದ ಯೇಸು ಕೃಪಾಲಯದ ಫಾದರ್‌ ಜಾನ್ಸನ್‌ ಪೌಲ್‌ ತಿಳಿಸಿದರು.

ಅಲಂಕಾರಿಕ ವಸ್ತುಗಳ ದರ (₹ಗಳಲ್ಲಿ)

ಕ್ರಿಸ್‌ಮಸ್‌ ಮರ;100-10000

ಗಂಟೆಗಳು;50-300

ಮರದ ಅಲಂಕಾರ ಸೆಟ್;80–450

ನಕ್ಷತ್ರಗಳು;20-500

ಸಾಂಟಾ ಕ್ಲಾಸ್‌ ಉಡುಪು;200-1500

ಮಿಂಚು ಹಾರಗಳು;50–200

ಲೈಟಿಂಗ್‌ ಸೆಟ್‌ಗಳು;100–500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.