ADVERTISEMENT

ಮೈಸೂರು: ‘ಸಹಕಾರ ಸಂಘ: ಬಡವರ ಸಂಜೀವಿನಿ’

‘ಮೈಸೂರು ಸಿಟಿ ಕೋ– ಆಪರೇಟಿವ್‌ ಹೌಸಿಂಗ್‌ ಸೊಸೈಟಿ’ ಶತಮಾನೋತ್ಸವ: ಶಾಸಕ ಜಿ.ಟಿ.ದೇವೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 13:19 IST
Last Updated 4 ಸೆಪ್ಟೆಂಬರ್ 2022, 13:19 IST
ಮೈಸೂರಿನಲ್ಲಿ ಭಾನುವಾರ ‘ಮೈಸೂರು ಸಿಟಿ ಕೋ– ಆಪರೇಟಿವ್‌ ಹೌಸಿಂಗ್‌ ಸೊಸೈಟಿ’ಯು ಆಯೋಜಿಸಿದ್ದ ‘ಶತಮಾನೋತ್ಸವ’ದಲ್ಲಿ ಶಿಲಾಫಲಕವನ್ನು ಬಿಜೆಪಿ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅನಾವರಣಗೊಳಿಸಿದರು. ಮುಖಂಡ ಎಂ.ಕೆ.ಸೋಮಶೇಖರ್‌, ಸಂಘದ ಅಧ್ಯಕ್ಷ ಶ್ರೀನಿವಾಸ್‌, ಶಾಸಕರಾದ ಎಲ್‌.ನಾಗೇಂದ್ರ, ಜಿ.ಟಿ.ದೇವೇಗೌಡ, ಉಪಾಧ್ಯಕ್ಷ ಕೆ.ಜಿ.ಶಂಕರನಾರಾಯಣಶಾಸ್ತ್ರಿ, ವಿಧಾನಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಇದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಭಾನುವಾರ ‘ಮೈಸೂರು ಸಿಟಿ ಕೋ– ಆಪರೇಟಿವ್‌ ಹೌಸಿಂಗ್‌ ಸೊಸೈಟಿ’ಯು ಆಯೋಜಿಸಿದ್ದ ‘ಶತಮಾನೋತ್ಸವ’ದಲ್ಲಿ ಶಿಲಾಫಲಕವನ್ನು ಬಿಜೆಪಿ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅನಾವರಣಗೊಳಿಸಿದರು. ಮುಖಂಡ ಎಂ.ಕೆ.ಸೋಮಶೇಖರ್‌, ಸಂಘದ ಅಧ್ಯಕ್ಷ ಶ್ರೀನಿವಾಸ್‌, ಶಾಸಕರಾದ ಎಲ್‌.ನಾಗೇಂದ್ರ, ಜಿ.ಟಿ.ದೇವೇಗೌಡ, ಉಪಾಧ್ಯಕ್ಷ ಕೆ.ಜಿ.ಶಂಕರನಾರಾಯಣಶಾಸ್ತ್ರಿ, ವಿಧಾನಪರಿಷತ್‌ ಸದಸ್ಯ ಸಿ.ಎನ್‌.ಮಂಜೇಗೌಡ ಇದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಬಡವರು, ಮಧ್ಯಮವರ್ಗದವರಿಗೆ ಸಹಕಾರ ಸಂಘಗಳೇ ಸಂಜೀವಿನಿ. ಸರ್ಕಾರ ಮಾಡದ ಕಲ್ಯಾಣ ಕೆಲಸಗಳನ್ನು ಸಂಘಗಳು ಮಾಡಿವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಶ್ಲಾಘಿಸಿದರು.

ದೇವರಾಜ ಮೊಹಲ್ಲಾದ ಆಲಮ್ಮ ಛತ್ರದಲ್ಲಿ ‘ಮೈಸೂರು ಸಿಟಿ ಕೋ– ಆಪರೇಟಿವ್‌ ಹೌಸಿಂಗ್‌ ಸೊಸೈಟಿ’ಯು ಭಾನುವಾರ ಆಯೋಜಿಸಿದ್ದ ‘ಶತಮಾನೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮೈಸೂರು ಅರಸರು ಶತಮಾನಕ್ಕೂ ಹಿಂದೆಯೇ ಸಹಕಾರ ಸಂಘವನ್ನು ಸ್ಥಾಪಿಸಲು ನೆರವು ನೀಡಿದರು. ಆಗಿನ ಸಹಕಾರಿಗಳ ತ್ಯಾಗದಿಂದಲೇ ಸಂಘಗಳುಆರ್ಥಿಕವಾಗಿ ಸಬಲವಾದವು. ರೈತರು, ಬಡವರು ಸಂಕಷ್ಟಕ್ಕೆ ಸಿಲುಕಿದಾಗ ಸಾಲ ಸೌಲಭ್ಯ ನೀಡಿ ಜೀವನವನ್ನು ಕಟ್ಟಿಕೊಟ್ಟವು’ ಎಂದರು.

ADVERTISEMENT

‘ಪ್ರತಿ ಗ್ರಾಮದಲ್ಲೂ ಗ್ರಾಮ ಪಂಚಾಯಿತಿ, ಸಹಕಾರ ಸಂಘ ಹಾಗೂ ಶಾಲೆಯಿದ್ದರೆ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂಬುದು ಮಹಾತ್ಮ ಗಾಂಧೀಜಿ ಅಭಿಪ್ರಾಯವಾಗಿತ್ತು. ಜವಹರಲಾಲ್‌ ನೆಹರೂ, ಲಾಲ್‌ಬಹದ್ದೂರ್‌ ಶಾಸ್ತ್ರಿ ಮೊದಲಾದ ಪ್ರಧಾನಿಗಳು ಸಹಕಾರ ಸಂಘ ಬಲಿಷ್ಠಗಳೊಳ್ಳಲು ಸಹಕರಿಸಿದರು. ವರ್ಗೀಸ್‌ ಕುರಿಯನ್‌ ಅವರ ಅಮುಲ್‌ ಕ್ರಾಂತಿಯು ದೇಶದಾದ್ಯಂತ ಹಾಲಿನ ಸಹಕಾರ ಸಂಘಗಳನ್ನು ಸ್ಥಾಪಿಸುವಂತೆ ಮಾಡಿತು’ ಎಂದು ನೆನೆದರು.

‘ಸಹಕಾರ ಸಂಘಗಳು ಆರಂಭವಾಗಿ ದಶಕಗಳೂ ಕಳೆದರೂ, ಸಂಘದ ಹೆಸರಿನಲ್ಲಿ ನೇರವಾಗಿ ಜಮೀನು ಖರೀದಿಸಲು ಕಾನೂನುಗಳು ಅಡ್ಡಿಯಾಗಿವೆ. ಸಂಘಗಳು ಗೊತ್ತುಪಡಿಸಿದ ಜಮೀನನ್ನು ಸರ್ಕಾರವೇ ಖರೀದಿಸಿ ಸಂಘಗಳಿಗೆ ನೀಡಿದರೆ ಜನರಿಗೆ ಹಂಚುವ ಕೆಲಸವನ್ನು ಸಂಘಗಳು ಮಾಡಲಿವೆ’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘ಬ್ಯಾಂಕ್‌ಗಳು ಸಾಲವೇ ನೀಡದಿದ್ದಾಗ ಮನೆ ದುರಸ್ತಿಗೆ ಸಾಲವನ್ನು ಸಂಘಗಳು ನೀಡಿವೆ.ನಗರ ಪ್ರದೇಶದ ಬಾಡಿಗೆ ಮನೆಗಳಲ್ಲಿ ಇರುವ ಜನರಿಗೆ ವಸತಿ ನಿವೇಶನಗಳನ್ನು ನೀಡಿರುವುದು ಅಭಿನಂದನೀಯ’ ಎಂದರು.

ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್‌ ಮಾತನಾಡಿ, ‘ಬೆಳಗಾವಿ, ವಿಜಯಪುರಗಳ ಸಹಕಾರ ಸಂಘಗಳ ವ್ಯಾಪ್ತಿ ದೊಡ್ಡದು. ಆದರೆ, ಮೈಸೂರು ಭಾಗದ ಸಂಘಗಳ ವಹಿವಾಟು ಚಿಕ್ಕದಾಗಿದ್ದರೂ, ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡಿವೆ. ಮನೆ ರಿಪೇರಿ, ಕೊಠಡಿ ನಿರ್ಮಾಣಕ್ಕೆಲ್ಲ ಸಾಲಕೊಟ್ಟಿವೆ’ ಎಂದರು.

ಮುಖಂಡ ಸಿ.ಎಚ್‌.ವಿಜಯಶಂಕರ್ ಅವರು ಶತಮಾನೋತ್ಸವದ ಶಿಲಾಫಲಕವನ್ನು ಅನಾವರಣಗೊಳಿಸಿದರು.

ಶಾಸಕ ಎಲ್‌.ನಾಗೇಂದ್ರ, ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಉದ್ಯಮಿ ಬಿ.ಎಲ್‌.ನಾಗೇಂದ್ರ ಪ್ರಸಾದ್‌, ಸಹಕಾರ ಸಂಘಗಳ ನಿಬಂಧಕ ಜಿ.ಆರ್.ವಿಜಯ್‌ಕುಮಾರ್, ಸೊಸೈಟಿ ಅಧ್ಯಕ್ಷ ಎನ್‌.ಶ್ರೀನಿವಾಸ, ಉಪಾಧ್ಯಕ್ಷ ಕೆ.ಜಿ.ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ಬಿ.ಎಸ್‌.ಶ್ರೀನಾಥ್‌, ಸದಸ್ಯರಾದ ಡಿ.ದೊಡ್ಡಯ್ಯ, ನಾರಾಯಣ ಸ್ವಾಮಿ ನಾಯ್ಡು, ಎಲ್.ವೆಂಕಟಕೃಷ್ಣಶಾಸ್ತ್ರಿ, ಮಂಜುನಾಥ, ಸೀತಾಲಕ್ಷ್ಮಿ, ಟಿ.ಶಾರದಮ್ಮ, ಬಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.