ADVERTISEMENT

ಬೇಸಾಯ ಮಾಹಿತಿಯಿಂದ ಬೆಳೆ ಸಂರಕ್ಷಣೆ: ಮಹದೇವ್‌

ತೆಂಗು ರೋಗ ಬಾಧೆ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:38 IST
Last Updated 29 ಜನವರಿ 2026, 6:38 IST
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತೆಂಗು ರೋಗಬಾಧೆ ನಿಯಂತ್ರಣ ಕಾರ್ಯಾಗಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್‌ ಮತ್ತು ಗಣ್ಯರು ಉದ್ಘಾಟಿಸಿದರು
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತೆಂಗು ರೋಗಬಾಧೆ ನಿಯಂತ್ರಣ ಕಾರ್ಯಾಗಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್‌ ಮತ್ತು ಗಣ್ಯರು ಉದ್ಘಾಟಿಸಿದರು   

ಹುಣಸೂರು: ‘ತೆಂಗು ಬೇಸಾಯದತ್ತ ರೈತರು ಹೆಚ್ಚು ಒಲವು ತೋರುತ್ತಿದ್ದು, ಬೇಸಾಯದ ಅಗತ್ಯ ಮಾಹಿತಿಯಿಂದ ಬೆಳೆ ಸಂರಕ್ಷಿಸಬಹುದು’ ಎಂದು ಕರಿಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್‌ ಹೇಳಿದರು.

ತಾಲ್ಲೂಕಿನ ಗದ್ದಿಗೆ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಒಂದು ದಿನದ ತೆಂಗು ಬೆಳೆಗಾರರ ಕಾರ್ಯಾಗಾರದಲ್ಲಿ ಮಾತನಾಡಿ, ‘ತಾಲ್ಲೂಕಿನಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕೊಳವೆ ಬಾವಿ ಆಧರಿಸಿ ಲಕ್ಷಾಂತರ ಎಕರೆಯಲ್ಲಿ ತೆಂಗು ಬೆಳೆಯಲಾಗಿದೆ. ಸಸಿ ಕಾಪಾಡುವುದು, ರೋಗ ಬಾಧೆ ನಿಯಂತ್ರಣ, ಔಷಧೋಪಚಾರ ಮತ್ತು ರಸಗೊಬ್ಬರ ನೀಡಿ ಪೋಷಿಸುವ ಬಗ್ಗೆ ಅರಿವು ಅಗತ್ಯ’ ಎಂದರು.

ಕಾರ್ಯಗಾರದಲ್ಲಿ ಮೈಸೂರು ತೋಟಗಾರಿಕಾ ಕಾಲೇಜಿನ ಸಹಾಯುಕ ಪ್ರಾಧ್ಯಾಪಕ ಸಿದ್ದಪ್ಪ, ‘ತೆಂಗಿಗೆ ಪೋಷಕಾಂಶ ನೀಡಲು ಪ್ರತಿ ಗಿಡಕ್ಕೆ 20ರಿಂದ 25 ಕೆ.ಜಿ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ 3 ಕೆ.ಜಿ, ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೈಟ್‌ 500 ಗ್ರಾಂ, ಡಿಎಪಿ 750 ಗ್ರಾಂ, ಎಂ.ಒ.ಪಿ. 1 ಕೆ.ಜಿ. ನೀಡಬೇಕು’ ಎಂದರು.

ADVERTISEMENT

ಕೀಟ ತಜ್ಞ ಮುತ್ತುರಾಜ್‌ ಮಾತನಾಡಿ, ‘1 ಲೀ. ನೀರಿಗೆ ಲೆಸೆಂಟಾ ಕೀಟನಾಶಕವನ್ನು 1 ಗ್ರಾಂ ಬೆರೆಸಿ ತೆಂಗಿನ ಸುಳಿಗೆ ಸುರಿದರೆ ಕೀಟ ಬಾಧೆ ಕಡಿಮೆ ಆಗುವುದು. ಕಪ್ಪು ತಲೆ ಹುಳುಬಾಧೆಗೆ ಪ್ರೊಫೆನೋಫಾಸ್‌ ಮತ್ತು ಸೈಪರಮೆಥರಿನ್‌ ಸಂಮಿಶ್ರಣ ಕೀಟನಾಶಕವನ್ನು ಬೇರಿಗೆ ನೀಡಿದಲ್ಲಿ ಬಾಧೆ ಹತೋಟಿಗೆ ಬರಲಿದೆ’ ಎಂದರು.

‘ಬಿಳಿನೋಣ ಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆಯನ್ನು ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ನಿಯಂತ್ರಿಸಲು ಸಾಧ್ಯ’ ಎಂದರು.

ಕಾರ್ಯಗಾರದಲ್ಲಿ ಹುಣಸೂರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ನಾಗರಾಜ್‌ ಮಾತನಾಡಿದರು. ರೈತ ಮುಖಂಡರಾದ ದೇವರಾಜು, ಸೂರ್ಯಕುಮಾರ್‌, ರಾಜಶೇಖರ್‌, ರಾಮಕೃಷ್ಣ, ವೆಂಕಟೇಶ್‌, ಪ್ರಕಾಶ್‌ ಸ್ವಾಮಿ, ಸಹಾಯಕ ತೋಟಗಾರಿಕೆ ಅಧಿಕಾರಿ ರವಿ, ನಿತಿನ್‌, ಚೈತ್ರಾ, ಫಯಾಜ್‌ ಪಾಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.