ADVERTISEMENT

ತೋಟಗಾರಿಕಾ ಇಲಾಖೆಯಲ್ಲಿ ಕಮಿಷನ್ ವ್ಯವಹಾರ; ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 7:00 IST
Last Updated 15 ಡಿಸೆಂಬರ್ 2021, 7:00 IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಎನ್.ನಂಜೇಗೌಡ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಎನ್.ನಂಜೇಗೌಡ   

ಮೈಸೂರು: ತೋಟಗಾರಿಕಾ ಇಲಾಖೆಯಲ್ಲಿ ಸರ್ಕಾರದ ಮಟ್ಟದಲ್ಲಿಯೇ ಕಮಿಷನ್ ವ್ಯವಹಾರ ನಡೆಯುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಎನ್.ನಂಜೇಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಹನಿ ನೀರಾವರಿ ಉಪಕರಣಗಳನ್ನು ಒದಗಿಸುವ ಕಂಪನಿಗಳು ಅನುಮೋದನೆ ಪಡೆದುಕೊಳ್ಳಲು ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಶೇ 6 ರಿಂದ ಶೇ 15 ರಷ್ಟು ಕಮಿಷನ್ ನೀಡಬೇಕಿದೆ ಎಂದು ಕಿಡಿಕಾರಿದರು.

ಸರ್ಕಾರ ನವೆಂಬರ್ ತಿಂಗಳಿನಲ್ಲಿ ಖರೀದಿ ಕೇಂದ್ರ ತೆರೆಯಬೇಕಿತ್ತು. ಆದರೆ ಇದುವರೆಗೂ ತೆರೆದಿಲ್ಲ. ಭತ್ತವನ್ನು ಕಟಾವು ಮಾಡಿದ ರೈತರು ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರು ಖರೀದಿಸುವ ಹನಿ ನೀರಾವರಿ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಶೇ 18 ರಷ್ಟು ಜಿಎಸ್‌ಟಿ ವಿಧಿಸಿರುವ ಈ ಸರ್ಕಾರವನ್ನು ನಾವು ರೈತ ಪರ ಸರ್ಕಾರ ಎಂದು ಕರೆಯಬೇಕೆ ಎಂದು ಪ್ರಶ್ನಿಸಿದರು.

ಪವರ್ ಟಿಲ್ಲರ್ ಹಾಗೂ ಕಳೆ ತೆಗೆಯುವ ಯಂತ್ರಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ನೇಗಿಲು, ಕಲ್ಟಿವೇಟರ್, ರೂಟ್ ವೇಟರ್ ಹಾಗೂ ಇತರ ಕೃಷಿ ಯಂತ್ರೋಪಕರಣಗಳ ಖರೀದಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಇನ್ನು 15 ದಿನಗಳಲ್ಲಿ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹಾರೋಹಳ್ಳಿ ಪಾಪೇಗೌಡ, ಮುಖಂಡರಾದ ಕಿರಂಗೂರು ಪಾಪಣ್ಣ, ಬೊಕ್ಕಳ್ಳಿ ನಂಜುಂಡಸ್ವಾಮಿ ಹಾಗೂ ಬನ್ನೂರು ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.