ಪ್ರಾತಿನಿಧಿಕ ಚಿತ್ರ
ಹುಣಸೂರು: ಭಾರಿ ಮಳೆಯಿಂದ ತಂಬಾಕು ಬೆಳೆಗಾರರಿಗೆ ನಷ್ಟವಾಗಿರುವ ಪ್ರದೇಶವನ್ನು ಕೃಷಿ ಇಲಾಖೆಯಿಂದ ವರದಿ ಪಡೆದು ಪರಿಹಾರ ನೀಡಲು ಕ್ರಮವಹಿಸಲು ತಂಬಾಕು ಮಂಡಳಿ ಮುಂದಾಗಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ವಿ.ಸುಬ್ಬರಾವ್ ತಿಳಿಸಿದ್ದಾರೆ.
ಮೈಸೂರು ಮತ್ತು ಹಾಸನ ಜಿಲ್ಲೆಯಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗುತ್ತಿದ್ದು, ಇದರ ಪರಿಣಾಮ ತಂಬಾಕು ಬೆಳೆಗೆ ಭಾರಿ ನಷ್ಟವಾಗಿದೆ ಎಂದು ಬೆಳೆಗಾರರು ಮಾಡಿದ ಮನವಿಗೆ ತಂಬಾಕು ಮಂಡಳಿ ಸ್ಪಂದಿಸಿ ಕೃಷಿ ಇಲಾಖೆ ತನ್ನ ವರದಿ ನೀಡಿದ ಬಳಿಕ ಮಂಡಳಿಗೆ ಸಲ್ಲಿಸಿ ಪರಿಹಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಂಬಾಕು ಬೆಳೆಗಾರರು ಆತಂಕಪಡದೆ ಗುಣಮಟ್ಟದ ತಂಬಾಕು ಉತ್ಪತ್ತಿ ಮಾಡುವ ಕಡೆ ಎಚ್ಚರವಹಿಸಬೇಕು. ಮಳೆಯಲ್ಲಿ ಕಠಾವು ಮಾಡಿದ ತಂಬಾಕು ಸೊಪ್ಪನ್ನು ನೇರವಾಗಿ ಹದಗೊಳಿಸುವ ಬ್ಯಾರನ್ ಗೆ ಹಾಕುವುದರಿಂದ ಎಲೆ ಗುಣಮಟ್ಟ ಕಳೆದುಕೊಳ್ಳಲಿದೆ. ಹೀಗಾಗಿ ರೈತರು ಮಳೆಯಲ್ಲಿ ಕಠಾವು ಮಾಡಿದ ಸೊಪ್ಪನ್ನು ನೆರಳಿನಲ್ಲಿ ನೀರನ್ನು ಸಂಪೂರ್ಣ ಜಾರಿಸಿದ ಬಳಿಕವಷ್ಟೆ ಬ್ಯಾರನ್ ನಲ್ಲಿ ಹದಗೊಳಿಸಲು ಹಾಕಬೇಕು ಎಂದು ತಿಳಿಸಿದ್ದಾರೆ.
ಸ್ವಾಗತ: ರಾಜ್ಯದ ತಂಬಾಕು ಬೆಳೆಗಾರರು ದಶಕಗಳಿಂದ ಪ್ರಾಕೃತಿಕವಾಗಿ ನಷ್ಟ ಅನುಭವಿಸುತ್ತಿದ್ದು, ಮಂಡಳಿಗೆ ಪರಿಹಾರ ನೀಡುವಂತೆ ರೈತ ಸಂಘ ಮನವಿ ಮಾಡುತ್ತಲೇ ಬಂದಿತ್ತು. ಈ ಸಾಲಿನಲ್ಲಿ ಮಂಡಳಿ ಸ್ಪಂದಿಸಿರುವುದನ್ನು ರಾಜ್ಯ ರೈತ ಸಂಘ ಸ್ವಾಗತಿಸಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರವೂ ಮಳೆಯಿಂದಾಗುವ ನಷ್ಟಕ್ಕೆ ವಾಣಿಜ್ಯ ಬೆಳೆ ತಂಬಾಕಿಗೆ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.