ADVERTISEMENT

ಪಾಶ್ಚಾತ್ಯ ದೇಶಗಳ ಜತೆಗೆ ಸ್ಪರ್ಧೆ ಕಷ್ಟ

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 4:09 IST
Last Updated 23 ನವೆಂಬರ್ 2020, 4:09 IST
ಟೀಂ ಮೈಸೂರು ಹಾಗೂ ವಿಷನ್‌ ಟೀಂ ಆಫ್‌ ಮೈಸೂರು ವತಿಯಿಂದ ಪ್ರೊ.ಕೆ.ಎಸ್‌.ರಂಗಪ್ಪ, ಪ್ರೊ.ಕೆ.ಭೈರಪ್ಪ, ಪ್ರೊ.ಕೆ.ಬಸವಯ್ಯ ಅವರನ್ನು ಅಭಿನಂದಿಸಲಾಯಿತು
ಟೀಂ ಮೈಸೂರು ಹಾಗೂ ವಿಷನ್‌ ಟೀಂ ಆಫ್‌ ಮೈಸೂರು ವತಿಯಿಂದ ಪ್ರೊ.ಕೆ.ಎಸ್‌.ರಂಗಪ್ಪ, ಪ್ರೊ.ಕೆ.ಭೈರಪ್ಪ, ಪ್ರೊ.ಕೆ.ಬಸವಯ್ಯ ಅವರನ್ನು ಅಭಿನಂದಿಸಲಾಯಿತು   

ಮೈಸೂರು: ವಿಜ್ಞಾನ ಹಾಗೂ ಸಂಶೋಧನೆಯ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ ದೇಶಗಳ ಜತೆ ಸ್ಪರ್ಧಿಸುವುದು ಬಹಳ ಕಷ್ಟ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಹೇಳಿದರು.

ಟೀಂ ಮೈಸೂರು ಹಾಗೂ ವಿಷನ್‌ ಟೀಂ ಆಫ್‌ ಮೈಸೂರು ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರೊ.ರಂಗಪ್ಪ, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಭೈರಪ್ಪ ಮತ್ತು ಮೈಸೂರು ವಿವಿ ರಸಾಯನವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಕೆ.ಬಸವಯ್ಯ ಅವರನ್ನು ಅಭಿನಂದಿಸಲಾಯಿತು.

ADVERTISEMENT

‘ಅಮೆರಿಕ, ಬ್ರಿಟನ್, ಜರ್ಮನಿ ಒಳಗೊಂಡಂತೆ ಮುಂದುವರಿದ ದೇಶಗಳಲ್ಲಿ ದೊರೆಯುವ ಸೌಲಭ್ಯ, ಅಲ್ಲಿನ ಪರಿಸರ, ಶಿಕ್ಷಣ ವ್ಯವಸ್ಥೆಗೂ ನಮ್ಮ ದೇಶಕ್ಕೂ ಹೋಲಿಕೆ ಮಾಡಿದರೆ ನಾವು ಏನೂ ಅಲ್ಲ’ ಎಂದು ರಂಗಪ್ಪ ಅಭಿಪ್ರಾಯಪಟ್ಟರು.

‘ಸ್ಟ್ಯಾನ್‌ಫೋರ್ಡ್‌ ವಿವಿ ಪ್ರಕಟಿಸಿರುವ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಂತಸದ ವಿಷಯ. ಕಳೆದ 40 ವರ್ಷಗಳಿಂದ ಸಂಶೋಧನಾ ಕ್ಷೇತ್ರದಲ್ಲಿ ಕಾಯಾ ವಾಚಾ ಮನಸಾ ಎಂದು ಕೆಲಸ ಮಾಡಿಕೊಂಡು ಬಂದದ್ದಕ್ಕೆ ನನಗೆ ಸಿಕ್ಕಿದ ಗೌರವ ಇದು ಎಂದು ಭಾವಿಸಿದ್ದೇನೆ’ ಎಂದರು.

‘ಎರಡೂ ಸಂಸ್ಥೆಗಳು ನನ್ನನ್ನು ಸೇರಿದಂತೆ ಮೂವರನ್ನು ಅಭಿನಂದಿಸಿದೆ. ನಮಗೆ ಮೈಸೂರಿನಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟ ಮೈಸೂರು ವಿವಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನಾವು ಆಭಾರಿಗಳಾ
ಗಿದ್ದೇವೆ. ಭಾರತ ಸರ್ಕಾರವು ಸಂಶೋಧನೆ ಮಾಡಲು ಸಾಕಷ್ಟು ಅವಕಾಶ ಕೊಟ್ಟಿದೆ’ ಎಂಬುದನ್ನು ನೆನಪಿಸಿಕೊಂಡರು.

‘100 ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ವಿವಿಗೆ ತನ್ನದೇ ಆದ ಘನತೆ ಇದೆ. ವಿವಿಯ ಹೆಸರು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಮೈಸೂರು ವಿವಿಗೆ ಗೌರವ ತಂದುಕೊಡುವ ಕೆಲಸವನ್ನು ನಾವು ಇಲ್ಲಿಯವರೆಗೆ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ’ ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಬಿಜೆಪಿ ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.