ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ‘ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಆಸಕ್ತರು
ಮೈಸೂರು: ಸರ್ಕಾರಿ ನೌಕರಿ ಕಂಡುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಂಬಲಿಸುವ ಬಡ ಹಾಗೂ ಮಧ್ಯಮ ವರ್ಗದ ಯುವಜನರ ಕನಸಿಗೆ ನೀರೆರೆದು ಪೋಷಿಸುವ ಕೆಲಸವನ್ನು ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ‘ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ಮಾಡುತ್ತಿದೆ.
ಈಗಿನ ಸ್ಪರ್ಧೆ–ಪೈಪೋಟಿಗೆ ತಕ್ಕಂತೆ ಸಜ್ಜಾಗಲು ಯುವಜನರಿಗೆ ಎದುರಾಗುವ ಮಾರ್ಗದರ್ಶನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಕೆಲಸ ಮಾಡುತ್ತಿದೆ. ಸರಣಿ ತರಬೇತಿಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ‘ಸಹಾಯಹಸ್ತ’ ಚಾಚುತ್ತಿದೆ. ವರ್ಷವಿಡೀ ಒಂದಿಲ್ಲೊಂದು ತರಬೇತಿ ಶಿಬಿರ ನಡೆಸಿ ಯುವಕ–ಯುವತಿಯರಿಗೆ ‘ಜ್ಞಾನದ ಬೆಳಕಿನ ಕಂದೀಲು’ ಹಿಡಿಯುತ್ತಿದೆ.
ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದವರು, ಅನುಭವಿಗಳು, ಈಗಾಗಲೇ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಮಾರ್ಗದರ್ಶನ ಕೊಡಿಸುತ್ತಿದೆ. ಸಾಧಕರು, ಪ್ರತಿಭಾನ್ವಿತರೊಂದಿಗೆ ಸಂವಾದ–ಮಾತುಕತೆಗೆ ಅವಕಾಶ ಕಲ್ಪಿಸಿ ಸ್ಫೂರ್ತಿ ತುಂಬುವುದು ನಿರಂತರವಾಗಿ ನಡೆಯುತ್ತಿದೆ. ಸಮೀಪದಲ್ಲೇ ತರಬೇತಿ ದೊರೆಯುತ್ತಿರುವುದು ಈ ಭಾಗದ ಆಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಮಹತ್ವಾಕಾಂಕ್ಷಿ ಪ್ರಯೋಗ: ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ ಪ್ರಯೋಗವೇ ‘ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’. ಪದವಿ ಅಥವಾ ಸ್ನಾತಕೋತ್ತರ ಪದವಿ ಪ್ರಮಾಣಪತ್ರ ನೀಡಿಬಿಟ್ಟರೆ ವಿ.ವಿಗಳ ಕರ್ತವ್ಯ ಮುಗಿಯುವುದಿಲ್ಲ. ಈಗಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗುತ್ತದೆ. ಇದಕ್ಕಾಗಿ ಅಗತ್ಯ ಜ್ಞಾನ ಹಾಗೂ ಕೌಶಲ ತುಂಬಲು ರೂಪಗೊಂಡ ಕೇಂದ್ರವಿದು.
ಆರ್ಥಿಕವಾಗಿ ಹಿಂದುಳಿದವರಿಗೆ ಗುಣಮಟ್ಟದ ತರಬೇತಿ ನೀಡುವುದು ಮತ್ತು ಅವರನ್ನು ಉದ್ಯೋಗಗಳಲ್ಲಿ ನೆಲೆಗೊಳಿಸುವ ಆಶಯದಿಂದ ಕೇಂದ್ರ ಸ್ಥಾಪಿಸಿದ ಕೆಎಸ್‌ಒಯು, ಕೆಲಸ ಕಂಡುಕೊಳ್ಳಲು ಬಯಸುವವರ ಕನಸಿಗೆ ರೆಕ್ಕೆ ಕಟ್ಟುತ್ತಿದೆ; ಹಾರುವುದನ್ನೂ ಕಲಿಸುತ್ತಿದೆ.
ವಿವಿಧ ಪರೀಕ್ಷೆಗೆ: ಐಎಎಸ್, ಐಪಿಎಸ್, ಐಆರ್‌ಎಸ್, ಐಎಫ್‌ಎಸ್, ಕೆಎಎಸ್ ಅಧಿಕಾರಿಗಳಾಗಬೇಕು ಎಂದು ಬಯಸುವವರಿಗಾಗಿ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆ, ಎಫ್‌ಡಿಎ, ಎಸ್‌ಡಿಎ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್ ಮೊದಲಾದ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ತರಬೇತಿ ನೀಡಲಾಗುತ್ತಿದೆ. ಎನ್‌ಇಟಿ ಹಾಗೂ ಕೆ–ಸಿಇಟಿ ಪರೀಕ್ಷೆಗೂ ತಯಾರಿ ಕೊಡಲಾಗುತ್ತಿದೆ ಎನ್ನುತ್ತಾರೆ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ.
ತರಬೇತಿಗೆ ‘ಮುಕ್ತ ಗಂಗೋತ್ರಿ’ಯ ‘ಕಾವೇರಿ’ ಸಭಾಂಗಣ ಸಾಕ್ಷಿಯಾಗುತ್ತಿದೆ. ಇದೇ ವರ್ಷದ ಏ. 17ರಂದು ಪ್ರಾರಂಭವಾಗಿ ಈಚೆಗೆ ಮುಕ್ತಾಯವಾದ ತರಬೇತಿಯಲ್ಲಿ ವಿವಿಧ ಜಿಲ್ಲೆಗಳಿಂದ 183 ಮಂದಿ ಪಾಲ್ಗೊಂಡಿದ್ದರು. ಮೈಸೂರು ಸೇರಿದಂತೆ ನಾಡಿನ ನಾನಾ ಭಾಗಗಳ ನಿವೃತ್ತ ಕುಲಪತಿಗಳು, ಅಧ್ಯಾಪಕರು, ವಿಷಯ ತಜ್ಞರು, ಅಧಿಕಾರಿಗಳು ಅಭ್ಯರ್ಥಿಗಳಿಗೆ ಜ್ಞಾನ ಹಂಚಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ವಿ.ವಿಯಿಂದ ಉಚಿತ ತರಬೇತಿ ಕೊಡಲಾಗುತ್ತಿದೆ. ವಿವಿಧ ಜಿಲ್ಲೆಗಳ ಯುವ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ..ಪ್ರೊ.ಶರಣಪ್ಪ ವಿ.ಹಲಸೆ, ಕುಲಪತಿ, ಕೆಎಸ್‌ಒಯು
‘ಜ್ಞಾನಬುತ್ತಿ’ ಈ ಕೇಂದ್ರ
ಕೋವಿಡ್ ಕಾಲದಲ್ಲೂ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.