ADVERTISEMENT

ಮೈಸೂರು | ವಾದ ನಡೆಸಿ ಪ್ರಕರಣ ಗೆದ್ದ ದೂರುದಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 7:45 IST
Last Updated 1 ಆಗಸ್ಟ್ 2023, 7:45 IST

ಮೈಸೂರು: ನಿವೇಶನ ನೋಂದಣಿ ವಿಚಾರದಲ್ಲಿ ಕಂಪನಿ ವಿರುದ್ಧ ಗ್ರಾಹಕರ ಕೋರ್ಟ್‌ ಮೆಟ್ಟಿಲೇರಿದ್ದ ರಾಮಕೃಷ್ಣಾರ್ಪಣಾಂದ ಅವರು ತಾವೇ ವಾದ ನಡೆಸಿ ಪ್ರಕರಣ ಗೆದ್ದಿದ್ದಾರೆ. ಕಂಪೆನಿಯು ದೂರುದಾರರಿಗೆ ಬಡ್ಡಿಯ ಜೊತೆ ₹63 ಸಾವಿರ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. 

ಹಿನ್ನೆಲೆ: 2016ರಲ್ಲಿ ಟೆರ್ರಕಾನ್ ರೆಸಿಡನ್ಸಿಯು ತಾಲ್ಲೂಕಿನ ರಮ್ಮನಹಳ್ಳಿ ಸಮೀಪದ ಬೆಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದ ಬಗ್ಗೆ ನೀಡಿದ ಜಾಹೀರಾತು ಗಮನಿಸಿ, ಕೆ.ಆರ್‌ ಮೊಹಲ್ಲಾ ನಿವಾಸಿ ರಾಮಕೃಷ್ಣಾರ್ಪಣಾಂದ ಅವರು ನಿವೇಶನಕ್ಕಾಗಿ ಕಂಪನಿಗೆ 3 ಕಂತುಗಳಲ್ಲಿ ₹5,10,000 ಪಾವತಿಸಿ 513ನೇ ನಿವೇಶನ ಆಯ್ಕೆ ಮಾಡಿದ್ದರು. ಇನ್ನೊಂದು ವರ್ಷದಲ್ಲಿ ಮೊದಲನೇ ಹಂತವನ್ನು ಮುಕ್ತಾಯಗೊಳಿಸಿ, ನಿವೇಶನ ನೋಂದಣಿ ಮಾಡಿಸುವ ಭರವಸೆಯನ್ನು ಕಂಪನಿ ನೀಡಿತ್ತು.

‘ಹಣ ಪಡೆದ ಬಳಿಕ ರೆಸಿಡೆನ್ಸಿಯು ಕುಂಟುನೆಪ ಹೇಳಿ ನೋಂದಣಿಯನ್ನು ಮುಂದೆ ಹಾಕುತ್ತಿತ್ತು. 5 ವರ್ಷ ಕಳೆದರೂ ನೋಂದಣಿ ಮಾಡಿಲ್ಲ. ನಮ್ಮ ಗಮನಕ್ಕೆ ಬಾರದಂತೆ ಪೂರ್ವಭಾವಿ ನಕ್ಷೆಯನ್ನು ಬದಲಾಯಿಸಿದೆ. ಕಂಪೆನಿಯು ನೋಂದಣಿ ಮಾಡಿಕೊಡಬೇಕು ಇಲ್ಲವೇ ಬಡ್ಡಿ ಸಹಿತ ಹಣ ಹಿಂದಿರುಗಿಸಬೇಕು’ ಎಂದು ರಾಮಕೃಷ್ಣಾರ್ಪಣಾಂದ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿದ್ದರು.

ADVERTISEMENT

ಗ್ರಾಹಕ ನ್ಯಾಯಾಲಯವು ವಿಚಾರಣೆ ನಡೆಸಿ, ಕಂಪನಿಯು ಸೇವಾ ನ್ಯೂನ್ಯತೆ ಮೂಲಕ ಗ್ರಾಹಕರಿಗೆ ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ಹಿಂಸೆ ಉಂಟುಮಾಡಿದೆ ಎಂದು ಪರಿಗಣಿಸಿ ನಿವೇಶನ ಖರೀದಿಗೆ ನೀಡಿದ ₹5.20 ಲಕ್ಷವನ್ನು ಶೇ 8ರ ಬಡ್ಡಿ ಮೊತ್ತದೊಂದಿಗೆ ಹಿಂದಿರುಗಿಸುವಂತೆ ಆದೇಶ ನೀಡಿದೆ. ಅದರೊಂದಿಗೆ ಆರ್ಥಿಕ ನಷ್ಟಕ್ಕೆ ₹50 ಸಾವಿರ, ಮಾನಸಿಕ ಹಿಂಸೆಗೆ ₹10 ಸಾವಿರ, ಪ್ರಕರಣದ ವೆಚ್ಚ ₹3 ಸಾವಿರವನ್ನು ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.