ADVERTISEMENT

ಆರ್‌ಡಿಪಿಆರ್‌ನಿಂದ ಹಣ ಬಿಡುಗಡೆ ಮಾಡಿರಲಿಲ್ಲ: ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 7:46 IST
Last Updated 5 ಏಪ್ರಿಲ್ 2021, 7:46 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಮೈಸೂರು: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಹಣ ಬಿಡುಗಡೆ ಮಾಡಿರಲಿಲ್ಲ. ಶಾಸಕರು ಈ ಸಂಬಂಧ ಮುಖ್ಯಮಂತ್ರಿಗೆ ದೂರು ಕೊಟ್ಟಿದ್ದರಿಂದ; ಬಿಎಸ್‌ವೈ ಮಧ್ಯಪ್ರವೇಶಿಸಿದರು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸೋಮವಾರ ಇಲ್ಲಿ ಯಡಿಯೂರಪ್ಪ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ಶಾಸಕರ ಬೇಡಿಕೆಗೆ ಸಚಿವರು ಸ್ಪಂದಿಸಿದರೆ ಯಾರೊಬ್ಬರೂ ದೂರು ಕೊಡಲ್ಲ. ತಮಗೆ ಸ್ಪಂದಿಸದಿದ್ದಾಗ ಮಾತ್ರ ಮುಖ್ಯಮಂತ್ರಿಗೆ ದೂರು ಕೊಡುತ್ತಾರೆ. ಅಂತಹ ಸಂದರ್ಭ ಸಿಎಂ ತಮ್ಮ ಪರಮಾಧಿಕಾರ ಬಳಸುತ್ತಾರೆ. ಸ್ಪಂದಿಸದ ಸಚಿವರ ಖಾತೆಗೆ ಸಂಬಂಧಿಸಿದಂತೆ ನೇರವಾಗಿ ತಾವೇ ಪ್ರವೇಶಿಸಿ ಅನುದಾನವನ್ನು ಬಿಡುಗಡೆ ಮಾಡುತ್ತಾರೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ಸಚಿವ ಕೆ.ಎಸ್‌.ಈಶ್ವರಪ್ಪ ಶಾಸಕರ ಬೇಡಿಕೆಗೆ ಸ್ಪಂದಿಸಿರಲಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ‘ಇದು ಒಬ್ಬ ಸಚಿವರಿಗೆ ಸಂಬಂಧಿಸಿದ್ದಲ್ಲ. ಸಚಿವ ಸಂಪುಟದಲ್ಲಿರುವ ಎಲ್ಲರಿಗೂ ಅನ್ವಯಿಸಲಿದೆ. ಇದೂವರೆಗೂ ಮುಖ್ಯಮಂತ್ರಿಯಾಗಲಿ, ಅವರ ಮಗ ವಿಜಯೇಂದ್ರನಾಗಲಿ ನನ್ನ ಉಸ್ತುವಾರಿಯಿರುವ ಮೈಸೂರು ಜಿಲ್ಲೆ ಹಾಗೂ ಸಹಕಾರ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ’ ಎಂದು ಸೋಮಶೇಖರ್‌ ಉತ್ತರಿಸಿದರು.

ADVERTISEMENT

‘ಮೈಸೂರು ಭಾಗದಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆ, ವಿರೋಧ ಪಕ್ಷದವರ ನಾಡಿಮಿಡಿತ ಹೆಚ್ಚಿದೆ. ಅಸ್ತಿತ್ವದ ಪ್ರಶ್ನೆ ಕಾಡಲಾರಂಭಿಸಿದೆ. ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದೀಗ ಪ್ರಶ್ನೆ ಮಾಡುತ್ತಿರೋರು ಮುಖ್ಯಮಂತ್ರಿ ಆಗಿದ್ದಾಗ, ಅವರ ಮಕ್ಕಳು ಏಣು ಕಳ್ಳೆಪುರಿ ತಿನ್ನುತ್ತಾ ಕೂತಿದ್ದರಾ? ಈ ಬಗ್ಗೆ ನಾವು ಮಾತನಾಡಬೇಕಾಗುತ್ತದೆ’ ಎಂದು ಸಚಿವರು ತಿರುಗೇಟು ನೀಡಿದರು.

‘ಅಧಿವೇಶನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸದೆ ಸಿ.ಡಿ. ವಿಷಯ ಪ್ರಸ್ತಾಪಿಸಿದರು. ಮೇಟಿ ಪ್ರಕರಣ ಏನಾಯಿತು? ಯಾವ ತನಿಖೆ ನಡೆಸಿದರು? ಆದರೆ ಜಾರಕಿಹೊಳಿ ಪ್ರಕರಣದಲ್ಲಿ ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.