ADVERTISEMENT

ಕತ್ತೆಗಳೊಂದಿಗೆ ಬರುತ್ತೇವೆ: ಚರ್ಚೆಗೆ ಸಿದ್ಧರಿರುವಂತೆ ಪ್ರತಾಪಗೆ ಲಕ್ಷ್ಮಣ ಸವಾಲು

5ರಂದು ಚರ್ಚೆಗೆ ಸಿದ್ಧರಿರುವಂತೆ ಪ್ರತಾಪಗೆ ಲಕ್ಷ್ಮಣ ಸವಾಲು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 11:28 IST
Last Updated 1 ಜುಲೈ 2022, 11:28 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಅಭಿವೃದ್ಧಿ ಕುರಿತ ಚರ್ಚೆಗೆ ಬರದೇ ಸಂಸದ ಪ್ರತಾಪ ಸಿಂಹ ಪಲಾಯನ ಮಾಡುತ್ತಿದ್ದಾರೆ. ಜುಲೈ 5ರಂದು ಹಂದಿ, ಕತ್ತೆಗಳೊಂದಿಗೆ ಕಚೇರಿಗೆ ಬರಲಿದ್ದೇನೆ’ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿದರು. ಹಂದಿ, ಕತ್ತೆಗೆ ನನ್ನನ್ನು ಹೋಲಿಸಿರುವುದಕ್ಕೆ ಬೇಸರವಿಲ್ಲ.

‘‌ಕೊಡವರ ಆಹಾರ ಪದ್ಧತಿಯಲ್ಲಿ ಹಂದಿಗೆ ಪ್ರಮುಖ ಸ್ಥಾನವಿದೆ. ಕೃತಜ್ಞತೆಗೆ ಹೆಸರಾಗಿರುವಕತ್ತೆಯನ್ನು ಮಡಿವಾಳ ಸಮುದಾಯ ಗೌರವಿಸುತ್ತದೆ. ನನ್ನನ್ನು ಅವುಗಳಿಗೆ ಹೋಲಿಸಿರುವುದಕ್ಕೆ ಬೇಸರವಿಲ್ಲ. ‌ಅಂದು ಮಧ್ಯಾಹ್ನ 12ಕ್ಕೆ ಬರುತ್ತೇನೆ. ಬಿಜೆಪಿ ಸರ್ಕಾರಗಳ ಅಭಿವೃದ್ಧಿ, ಮೈಸೂರಿಗೆ ನಿಮ್ಮ ಕೊಡುಗೆ ಕುರಿತು ಚರ್ಚಿಸಿ’ ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಮೂರು ಚುನಾವಣೆ ಸೋತಿರಬಹುದು. ಸ್ವಂತ ಹಣದಿಂದ ಚುನಾವಣೆ ಎದುರಿಸಿದ್ದೆ, 30 ವರ್ಷಗಳ ಹೋರಾಟಕ್ಕೆ ಜನರು ಮನ್ನಣೆ ನೀಡಿಲ್ಲವಲ್ಲ ಎಂದು ಕಣ್ಣೀರು ಹಾಕಿದ್ದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಇಬ್ಬರೂ ನಿಂತು ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ. ಸೋತರೆ ನಿಮ್ಮ ಪಿ.ಎ ಆಗಿ ಕೆಲಸ ಮಾಡುತ್ತೇನೆ. 2024ರ ಚುನಾವಣೆ ಗೆಲ್ಲುತ್ತೀರಾ ನೋಡುತ್ತೇನೆ’ ಎಂದು ಸವಾಲೆಸೆದರು.

ADVERTISEMENT

ಪೇಟೆ ರೌಡಿ ಬಿರುದು ನನಗಿಲ್ಲ: ‘ಪತ್ನಿಯನ್ನು ತಂಗಿಯೆಂದು ಹೇಳಿ ಮುಡಾದಿಂದ ನಿವೇಶನ ಪಡೆದಿಲ್ಲ. ₹ 5 ಕೋಟಿ ವೆಚ್ಚದ ಮನೆ ಕಟ್ಟಿಸುತ್ತಿರುವ, ಗ್ಯಾಸ್‌ ಪೈಪ್‌ಲೈನ್‌ಗೆ ₹ 50 ಕೋಟಿ, ಬೆಂಗಳೂರು– ಮೈಸೂರು ಹೆದ್ದಾರಿ ಯೋಜನೆಯಲ್ಲಿ ₹ 100 ಕೋಟಿ ಕಮಿಷನ್‌ ಪಡೆದಿರುವ ಆರೋಪಗಳು ನನ್ನ ಮೇಲಿಲ್ಲ. ಮಹಿಳಾ ಅಧಿಕಾರಿಗಳಿಗೆ ಅವಮಾನಿಸಿಲ್ಲ. ಪೇಟೆ ರೌಡಿ ಎಂಬ ಬಿರುದು ನನಗಿಲ್ಲ’ ಎಂದು ಲಕ್ಷ್ಮಣ ಹೇಳಿದರು.

‘₹ 1ನ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡಿಲ್ಲ. ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಿದರೆ 17 ಸಿ.ಡಿ.ಗಳನ್ನು ಜನರ ಮುಂದೆ ಬಿಡುಗಡೆ ಮಾಡುತ್ತೇವೆ’ ಎಂದರು.

‘ದಲಿತ ಮುಖಂಡರಾದ ಎಚ್‌.ಸಿ.ಮಹದೇವಪ್ಪ, ಶ್ರೀನಿವಾಸಪ್ರಸಾದ್‌, ಹರ್ಷವರ್ಧನ್‌ ಹಾಗೂ ವಕೀಲರನ್ನು ತೇಜೋವಧೆ ಮಾಡಿದ್ದೀರಿ. ಮೋದಿ ಅವರಿಗೆ 5 ಬಾರಿ ನೀವು ನಮಸ್ಕರಿಸಿದರೂ ಅವರು ವಾರೆಗಣ್ಣಿನಲ್ಲೂ ನೋಡಲಿಲ್ಲ. ರಾಮದಾಸ್‌ ಅವರಿಗೆ ಸಿಕ್ಕ ಶೇ 10 ರಷ್ಟು ಗೌರವ ನಿಮಗೆ ಸಿಗಲಿಲ್ಲ’ ಎಂದು ವ್ಯಂಗ್ಯವಾಡಿದರು.

‘ರೈಲುಗಳನ್ನು ಬೇಡಿಕೆಗೆ ತಕ್ಕಂತೆ ಇಲಾಖೆಯು ಹೆಚ್ಚಿಸುವುದರಿಂದ ಅದರಲ್ಲಿ ನಿಮ್ಮ ಕೊಡುಗೆಯೇನಿಲ್ಲ. 2022ರಲ್ಲಿ ನಾಗನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್‌ ಆರಂಭಿಸುವುದು ಏನಾಯಿತು. ಅಲ್ಲಿ ಒಂದು ಎಕರೆ ಭೂಸ್ವಾಧೀನವೂ ಆಗಿಲ್ಲ. ಸುಳ್ಳು ಹೇಳಿಕೊಂಡು ಓಡಾಡಬೇಡಿ’ ಎಂದರು.

ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಮಹೇಶ್ ಇದ್ದರು.

ವಿದ್ಯುತ್‌ ದರ ಹೆಚ್ಚಳಕ್ಕೆ ಆಕ್ರೋಶ: ‘ರಾಜ್ಯದ 22 ವಿದ್ಯುತ್‌ ಉತ್ಪಾದನಾ ಮೂಲಗಳಿಂದ 14,574 ಮೆಗಾ ವ್ಯಾಟ್‌ ಉತ್ಪಾದನೆಗೆ ಅವಕಾಶ ಇದ್ದರೂ, 6,708 ಮೆಗಾವ್ಯಾಟ್‌ ಉತ್ಪಾದಿಸಲಾಗುತ್ತಿದೆ. ಖಾಸಗಿ ಕಂಪನಿಗಳಿಂದ ಹೆಚ್ಚಿನ ದರಕ್ಕೆ ವಿದ್ಯುತ್‌ ಖರೀದಿಸಲಾಗುತ್ತಿದೆ’ ಎಂದು ಲಕ್ಷ್ಮಣ ವಾಗ್ದಾಳಿ ನಡೆಸಿದರು.

‘ಅದಾನಿ ಒಡೆತನದ ಯುಪಿಸಿಎಲ್‌ನಿಂದ ವಿದ್ಯುತ್‌ ಖರೀದಿಸುವ ಮೂಲಕ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಅವರು ₹ 300 ಕೋಟಿ ಕಮಿಷನ್‌ ಪಡೆಯುತ್ತಿದ್ದಾರೆ. ವರ್ಷಕ್ಕೆ ಒಂದು ಬಾರಿ ವಿದ್ಯುತ್‌ ಹೆಚ್ಚಳಗೊಳಿಸದೇ ನಿಯಮ ಮೀರಿ ಎರಡು ಬಾರಿ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.