ADVERTISEMENT

ಕಾಂಗ್ರೆಸ್ ಸರ್ಕಾರದಿಂದ ರಾಜ್ಯಕ್ಕೆ ದುರ್ದೆಸೆ: ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 13:44 IST
Last Updated 18 ಆಗಸ್ಟ್ 2023, 13:44 IST
ಸಿ.ಟಿ. ರವಿ
ಸಿ.ಟಿ. ರವಿ   

ಮೈಸೂರು: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಆರ್‌ಎಸ್‌ ಜಲಾಶಯ ಭರ್ತಿಯಾಗುತ್ತಿತ್ತು. ಈಗ ಜಲಾಶಯ ತುಂಬಿಲ್ಲ; ಕೃಷಿಗೆ ನೀರಿಲ್ಲವಾಗಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಶುರುವಾಗಿದೆ. ಸಮರ್ಪಕ ವಿದ್ಯುತ್‌ ಕೊಡದೇ ಇರುವುದರಿಂದ ಬಿಲ್‌ನಲ್ಲಿ ಶೂನ್ಯ ಎಂದೇ ಬರುತ್ತದೆ. ಇಂಥ ದುರ್ದೆಸೆ ಇರುವಾಗ ನಮ್ಮವರು ಕಾಂಗ್ರೆಸ್‌ಗೆ ಸೇರುತ್ತಾರೆನ್ನುವುದನ್ನು ನಂಬುವುದಿಲ್ಲ’ ಎಂದರು.

‘ಹೋಗುವವರನ್ನು ರಾಜಕೀಯ ಜಾಣ್ಮೆ ಇರುವವರು–ಬುದ್ಧಿವಂತರು ಎನ್ನುವುದಿಲ್ಲ. ದೂರಾಲೋಚನೆ ಇದೆ‌ ಎಂದು ಹೇಳಲಾಗುವುದಿಲ್ಲ. ಈ ಸರ್ಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೇ ಸಮಾಧಾನ ಇಲ್ಲ. ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತೆ? ಇದೆಲ್ಲ ಕಾರಣದಿಂದ ನಮ್ಮವರಾರೂ ಹೋಗುವ ಸಾಧ್ಯತೆ ಇಲ್ಲ ಎಂದು ನಂಬುತ್ತೇನೆ. ಎಸ್‌.ಟಿ.ಸೋಮಶೇಖರ್‌ ಜೊತೆಯೂ ಮಾತನಾಡುತ್ತೇನೆ’ ಎಂದರು.

ADVERTISEMENT

‘ಚುನಾವಣೆ ಮುಗಿದು ಮೂರು ತಿಂಗಳಾಗಿವೆ. ಸೋತಿರುವ ನಾವೇ ಇನ್ನೊಬ್ಬರತ್ತ ಬೊಟ್ಟು ಮಾಡುತ್ತಿಲ್ಲ. ಸೋಲಿಗೆ ನಾವೇ ಕಾರಣ, ತಪ್ಪು ನಮ್ಮದೇ ಎಂದೇ ಭಾವಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಈ ಸರ್ಕಾರದಿಂದಾಗಿ, ರಾಜ್ಯದ ಜನರ ಬಗ್ಗೆ ನಮಗೆ ಆತಂಕವಿದೆ. ಸಂಬಳ ಕೊಡಲಾಗುತ್ತಿಲ್ಲ. ಅಭಿವೃದ್ಧಿ ಆಗುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕೇವಲ ಮತಕ್ಕಾಗಿ ಐದು ಗ್ಯಾರಂಟಿಗಳ ಹಿಂದೆ ಬಿದ್ದಿದ್ದಾರೆ. ಇದರ ಪರಿಣಾಮ ನೋಡುತ್ತಿದ್ದೀರಿ. ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆ ಸ್ಥಿತಿ ಬರಬಹುದು. ಭವಿಷ್ಯದ ಮೈಸೂರು ಯೋಜನೆ ಏನೆಂದು ಕೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ ಉತ್ತರವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನವರು ಅಸಹನೆ, ಆಕ್ರೋಶ ಯಾವ ರೀತಿ ಹೊರ ಹಾಕುತ್ತಾರೆ ನೀವೇ ನೋಡುತ್ತೀರಿ. ಎಲ್ಲವೂ ಸರಿ ಇದ್ದರೆ ಆ ಪಕ್ಷದ ಶಾಸಕರು ಪತ್ರ ಬರೆಯುತ್ತಿದ್ದರೇಕೆ?’ ಎಂದು ಕೇಳಿದರು.

‘ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಇಲ್ಲ. ಪಕ್ಷ ಹೇಳಿದ್ದು ಮಾಡುವವನು ನಾನು. ಪಕ್ಷ ಸೂಚಿಸಿದ್ದಕ್ಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘಟನೆಯಲ್ಲಿ ತೊಡಗಿದವನು ನಾನು’ ಎಂದು ಪ್ರತಿಕ್ರಿಯಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ, ‘28 ಸ್ಥಾನ ಗೆಲ್ಲಲು ಅಗತ್ಯವಿರುವ ಎಲ್ಲ ಯೋಚನೆಯನ್ನೂ ಮಾಡುತ್ತೇನೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಚಿಂತನೆಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ತಪ್ಪು ತಿದ್ದಿಕೊಂಡು ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.