ADVERTISEMENT

ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್‌ ಕಾರಣ: ರಘು ಆರ್. ಕೌಟಿಲ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 7:48 IST
Last Updated 20 ಆಗಸ್ಟ್ 2021, 7:48 IST
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಡಿ.ದೇವರಾಜ ಅರಸು ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಟಿ.ಎಸ್‌.ಶ್ರೀವತ್ಸ ಮಾತನಾಡಿದರು. ಕೆ.ಜೆ.ರಮೇಶ್‌, ಜೋಗಿ ಮಂಜು, ರಘು ಆರ್‌. ಕೌಟಿಲ್ಯ, ಎಂ.ಜಿ. ಮಹೇಶ್‌ ಇದ್ದರು
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಡಿ.ದೇವರಾಜ ಅರಸು ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಟಿ.ಎಸ್‌.ಶ್ರೀವತ್ಸ ಮಾತನಾಡಿದರು. ಕೆ.ಜೆ.ರಮೇಶ್‌, ಜೋಗಿ ಮಂಜು, ರಘು ಆರ್‌. ಕೌಟಿಲ್ಯ, ಎಂ.ಜಿ. ಮಹೇಶ್‌ ಇದ್ದರು   

ಮೈಸೂರು: ‘ಕಾಂಗ್ರೆಸ್‌ ಪಕ್ಷವು ಡಿ.ದೇವರಾಜ ಅರಸು ಅವರನ್ನು ಬಳಸಿಕೊಂಡು, ಕೊನೆಗಾಲದಲ್ಲಿ ಹೀನಾಯವಾಗಿ ಕಂಡಿತು. ಅವರ ವ್ಯಕ್ತಿಗತ ತೇಜೋವಧೆ ಮಾಡುವ ಜೊತೆಗೆ ದುರಂತಮಯ ಅಂತ್ಯಕ್ಕೆ ಕಾರಣವಾಯಿತು’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ ಆರೋಪಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಡಿ.ದೇವರಾಜ ಅರಸು ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾನತೆಯ ಸಮಾಜವನ್ನು ಕಟ್ಟುವ ಮೂಲಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದ ದೇವರಾಜ ಅರಸು ಅವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅವರು ಭ್ರಷ್ಟರಾಗಿದ್ದರು ಎಂದೆಲ್ಲಾ ಬಿಂಬಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅರಸು ಎಲ್ಲ ವರ್ಗಗಳ ಅಭಿವೃದ್ಧಿಗೂ ಶ್ರಮಿಸಿದ್ದರು. ದನಿ ಇಲ್ಲದವರಿಗೆ ದನಿಯಾಗಿದ್ದರು. 12ನೇ ಶತಮಾನದ ಬಸವಣ್ಣನವರ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದವರು. ಅವರ ಚಿಂತನೆಗಳನ್ನು ಎದೆಗೆ ಅಪ್ಪಿಕೊಂಡು ಅನುಷ್ಠಾನಕ್ಕೆ ತಂದವರು ಬಿ.ಎಸ್‌.ಯಡಿಯೂರಪ್ಪ’ ಎಂದು ಹೇಳಿದರು.

‘ದೇವರಾಜ ಅರಸು ನಿಂತಲ್ಲಿ, ಕುಳಿತಲ್ಲಿ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರು. ಅದೇ ರೀತಿ ಯಡಿಯೂರಪ್ಪ ಸಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇಬ್ಬರೂ ಮಾನವೀಯ, ಮಾತೃ ಹೃದಯಿಗಳು’ ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್‌ ಮಾತನಾಡಿ, ‘ದೇವರಾಜ ಅರಸು ಭೂಸುಧಾರಣಾ ಕಾಯ್ದೆ ಜಾರಿಗೆ ತಂದಾಗ, ಅವರ ಬಳಿ 28 ಎಕರೆ ಜಮೀನು ಇತ್ತು. ಈ ಕಾಯ್ದೆ ಪ್ರಕಾರ, ಅವರು ತಮ್ಮ ಭೂಮಿಯನ್ನು ಉಳುವವನಿಗೆ ನೀಡುವ ಅಗತ್ಯ ಇರಲಿಲ್ಲ. ಆದರೂ, ಅವರ 4 ಎಕರೆ ಭೂಮಿಯನ್ನು ಗೇಣಿ ಮಾಡುತ್ತಿದ್ದ ರೈತನಿಗೆ ನೀಡುತ್ತಾರೆ’ ಎಂದು ತಿಳಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ನಗರ ಘಟಕದ ಅಧ್ಯಕ್ಷ ಜೋಗಿ ಮಂಜು ಮಾತನಾಡಿ, ‘ಕೇಂದ್ರ ಸರ್ಕಾರದಲ್ಲಿ 27 ಮಂದಿ ಹಿಂದುಳಿದ ಜನಾಂಗದವರನ್ನು ಸಚಿವರನ್ನಾಗಿ ಮಾಡಲಾಗಿದೆ. ಬಿಜೆಪಿ ಹಿಂದುಳಿದವರ ಪರ ಎಂಬುದಕ್ಕೆ ಇದು ಸಾಕ್ಷಿ’ ಎಂದರು.

ಪಾಲಿಕೆ ಸದಸ್ಯ ಕೆ.ಜೆ.ರಮೇಶ್‌, ಶಿವರಾಜ್‌ ಇದ್ದರು.

‘ಪ್ರತಿ ಜಿಲ್ಲೆಗೆ 1,000 ಹೊಲಿಗೆ ಯಂತ್ರ’

‌‘ರಾಜ್ಯದ 30 ಜಿಲ್ಲೆಗಳಿಗೆ ತಲಾ 1,000 ಹೊಲಿಗೆ ಯಂತ್ರಗಳು ಹಾಗೂ 500 ಕಂಪ್ಯೂಟರ್‌ ವಿತರಿಸುವ ಯೋಜನೆಯನ್ನು ಮುಖ್ಯಮಂತ್ರಿ ಘೋಷಣೆ ಮಾಡುವ‌ ಸಾಧ್ಯತೆ ಇದೆ’ ಎಂದು ರಘು ಕೌಟಿಲ್ಯ ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಅವರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

***

ಹಿಂದುಳಿದ ವರ್ಗದವರ ಆಶಾಕಿರಣ, ಶೋಷಿತರ ದನಿಯಾಗಿದ್ದವರು ದೇವರಾಜ ಅರಸು.

– ಟಿ.ಎಸ್‌.ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ

***

ದೇವರಾಜ ಅರಸು ಅವರ ಕಾರ್ಯಕ್ರಮಗಳಿಗೆ ನಿಜವಾದ ಹೊಳಪು, ಬೆಳಕು ನೀಡಿದ್ದು ಬಿಜೆಪಿ ಸರ್ಕಾರ.

– ರಘು ಆರ್‌. ಕೌಟಿಲ್ಯ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.