ADVERTISEMENT

ಸಮನ್ವಯದಿಂದ ಪರಿಣಾಮಕಾರಿ ಆಡಳಿತ ಸಾಧ್ಯ: ಸಚಿವ ಮಹದೇವಪ್ಪ

ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:52 IST
Last Updated 11 ನವೆಂಬರ್ 2025, 2:52 IST
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿದರು
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿದರು   

ಮೈಸೂರು: ‘ಪಕ್ಷ ಮತ್ತು ಸರ್ಕಾರದ ಸಮನ್ವಯದಿಂದ ಪರಿಣಾಮಕಾರಿ ಆಡಳಿತ ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ನಡೆದ ಕಾಂಗ್ರೆಸ್‌ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿ, ‘ನಾವು ಮಂತ್ರಿ, ಶಾಸಕರಾಗಲು ಪ್ರಾಮಾಣಿಕ ಕಾರ್ಯಕರ್ತರೇ ಮೂಲ ಕಾರಣ’ ಎಂದರು.

‘ಮತ ಕಳವು ಸಹಿ ಸಂಗ್ರಹ ಆರಂಭವಾದ ನಂತರ ದೇಶದಾದ್ಯಂತ ರಾಹುಲ್ ಗಾಂಧಿ ಅವರನ್ನು 35 ಕೋಟಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸಿದ್ದಾರೆ. ಅವರವರ ಮತಗಟ್ಟೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಬಿಚ್ಚಿಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1.5 ಲಕ್ಷ ಮತ ಕಳವಾಗಿದೆ. ಆ ಸಂಪೂರ್ಣ ಮಾಹಿತಿಯನ್ನು ಅವರಿಗೆ ಕೊಟ್ಟಿದ್ದೇವೆ. ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಅಭಿಯಾನ ಪಕ್ಷದ ಪ್ರತಿಯೊಬ್ಬರಿಗೂ ಮಹತ್ವದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೇಶ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು’ ಎಂದು ಕೋರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಸೇಠ್, ‘ಕಾಂಗ್ರೆಸ್ ನಮಗೆ ಅಧಿಕಾರ ಕೊಟ್ಟಿದೆ. ಪಕ್ಷ ಇಲ್ಲದಿದ್ದರೆ ನಾವ್ಯಾರೂ ಇಲ್ಲ. ಒಂದು ದೇಶ, ಒಂದು ಚುನಾವಣೆ, ಒಂದು ಧರ್ಮ ಎಂಬ ಸಂವಿಧಾನದ ವಿರೋಧಿ ಕುತಂತ್ರಗಳನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಗೆಲ್ಲುವ ಕಡೆಯೆಲ್ಲ ಬಿಜೆಪಿ ಮತ ಕಳವು ಮಾಡಿ ಗೆಲ್ಲುತ್ತಿದೆ’ ಎಂದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮೈಮುಲ್ ಅಧ್ಯಕ್ಷ ಈರೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಹಾಜರಿದ್ದರು. 

ತಿಂಗಳಲ್ಲಿ ಒಮ್ಮೆ ಪಕ್ಷದ ಕಚೇರಿಗೆ ಬರುತ್ತೇನೆ. ಕಾರ್ಯಕರ್ತರ ಅಹವಾಲುಗಳನ್ನು ಆಲಿಸುತ್ತೇನೆ. ನಿಗಮ–ಮಂಡಳಿಗಳ ನಿರ್ದೇಶಕರ ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ
ಡಾ.ಎಚ್‌.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.