ನಂಜನಗೂಡು: ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಸಿಲಿಂಡರ್ ಪ್ರದರ್ಶನ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದ್ದರು, ಆದರೆ ಈವರೆಗೂ ಬಂದಿಲ್ಲ. ಮನೆ ಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಏಕಾಏಕಿ ₹50 ಏರಿಕೆ ಮಾಡಿ ಬಡ ಹಾಗೂ ಮಧ್ಯಮ ವರ್ಗದವರ ಮೇಲೆ ಹೊರೆ ಹೊರೆಸಿದ್ದಾರೆ.
ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವುದರಿಂದ ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರು ಜೀವನ ಸಾಗಿಸುವುದೇ ಕಷ್ಟವಾಗಿದೆ, ಇಂತಹ ಜನವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರದ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಮಾತನಾಡಿ, ಕೇಂದ್ರ ಸರ್ಕಾರ ಈ ಕೂಡಲೇ ಸಿಲಿಂಡರ್ ಬೆಲೆ ಇಳಿಕೆ ಮಾಡಬೇಕು, ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆಗೊಳಿಸಿ ಬೆಲೆ ಇಳಿಕೆ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪ್ಪಿನಳ್ಳಿ ಶಿವಣ್ಣ, ಮುಖಂಡರಾದ ಕಳಲೆ ರಾಜೇಶ್, ಮಹೇಶ್, ಆದರ್ಶ, ಸುಕುಮಾರ್, ಲೋಕೇಶ್, ಸುಧಾಕರ, ರವಿ, ಕವಲಂದೆ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಗೌಡ, ದೇಬೂರು ಪರಶಿವಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.