ಜಿ.ಟಿ. ದೇವೇಗೌಡ
ಮೈಸೂರು: ‘ಕಾಂಗ್ರೆಸ್ ಕರ್ನಾಟಕದಲ್ಲಿ ಭಾರಿ ಗಟ್ಟಿಯಾಗಿದ್ದು, 138 ಶಾಸಕರ ಬೆಂಬಲದೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅದೃಷ್ಟ ಒಲಿದು ಬಂದಾಗ ಡಿ.ಕೆ. ಶಿವಕುಮಾರ್ ಸಹ ಮುಖ್ಯಮಂತ್ರಿಯಾಗಬಹುದು’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ,‘ಮುಖ್ಯಮಂತ್ರಿಯಾಗಬೇಕೆಂದು ಆಸೆಪಡುವುದು ತಪ್ಪಲ್ಲ. 1996ರಲ್ಲಿ ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿಯಾದಾಗ, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ನಾವು ಶಾಸಕರೆಲ್ಲ ಸಹಿ ಹಾಕಿ ಕೊಟ್ಟಿದ್ದೆವು. ಆದರೆ ಆಗಲಿಲ್ಲ. 2004ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದೇ ಪ್ರಚಾರ ಮಾಡಿದ್ದೆವು. ಆದರೆ ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಇಂದು ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ಮುಂದೊಂದು ದಿನ ಅವರಿಗೆ ಅದೃಷ್ಟ ಬರಬಹುದು’ ಎಂದರು.
ಜೆಡಿಎಸ್‌ನಿಂದ ದೂರ ಉಳಿದಿರುವ ಕುರಿತು ಪ್ರತಿಕ್ರಿಯಿಸಿ, ‘ನನ್ನ ಕ್ಷೇತ್ರ ತುಂಬಾ ವಿಶಾಲವಾಗಿದ್ದು, ಸಮಸ್ಯೆಗಳ ಆಗರವಾಗಿದೆ. ಕ್ಷೇತ್ರದ ಜನರ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಆದ್ಯತೆ ನೀಡಿದ್ದೇನೆ. ರಾಜಕೀಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.