ADVERTISEMENT

ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಬಯಲು: ಸಂಸದ ಯದುವೀರ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:48 IST
Last Updated 30 ಅಕ್ಟೋಬರ್ 2025, 14:48 IST
<div class="paragraphs"><p>ಸಂಸದ ಯದುವೀರ್‌</p></div>

ಸಂಸದ ಯದುವೀರ್‌

   

ಮೈಸೂರು: ‘ಧರ್ಮಸ್ಥಳ ವಿಚಾರದಲ್ಲಿ ದೂರು ನೀಡಿದವರ ಬಣ್ಣ ಬಯಲಾಗುತ್ತಿದೆ. ಆ ಕ್ಷೇತ್ರದ ಹೆಸರಿಗೆ ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತಿತ್ತು. ಈಗ ಕಾನೂನಾತ್ಮಕವಾಗಿ ಅದು ಸಾಬೀತಾಗುತ್ತಿದೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಲ್ಲಿ ಯಾವ ಅಸ್ತಿಪಂಜರಗಳೂ ಸಿಗಲಿಲ್ಲ. ಹೀಗಾಗಿ ದೂರುದಾರರೇ ದೂರು ವಾಪಸ್ ಪಡೆಯಲು ಮುಂದಾಗಿದ್ದಾರೆ. ಸೌಜನ್ಯ ಕೇಸ್ ಬಗ್ಗೆಯೂ ಪೂರ್ಣವಾಗಿ ತನಿಖೆಯಾಗಲಿ‌, ಎಲ್ಲ ಸತ್ಯವೂ ಹೊರಬರಲಿ’ ಎಂದರು.

ADVERTISEMENT

‘ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಚುನಾವಣಾ ಆಯುಕ್ತರನ್ನು ನಿಂದಿಸಿರುವುದು ಸರಿಯಲ್ಲ. ಸಾಂವಿಧಾನಿಕ ಸಂಸ್ಥೆಗಳಿಲ್ಲಿ ಇರುವವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅವರ ಸರ್ಕಾರ ಬಂದಿದ್ದು ಕೂಡ ಇದೇ ಚುನಾವಣೆ ವ್ಯವಸ್ಥೆಯಿಂದಲೇ. ಸರ್ಕಾರ ಬಂದಾಗ ಸರಿ ಎನ್ನುವುದು, ಬಾರದಿದ್ದಾಗ ತಪ್ಪು ಎನ್ನುವುದು ಎಷ್ಟು ಸರಿ ಎಂಬುದನ್ನು ಅವರೇ ಹೇಳಲಿ’ ಎಂದು ಪ್ರತಿಕ್ರಿಯಿಸಿದರು.

‘ಯಾರೋ ಒಂದಿಬ್ಬರ ಹೇಳಿಕೆಗಳಿಂದ ಈ ವ್ಯವಸ್ಥೆಯ ಬಗ್ಗೆ ಅನುಮಾನಗಳು ಬರುವುದಿಲ್ಲ. ಅಂತಹ ಅಭಿಪ್ರಾಯಗಳಿಗೆ ಬೆಲೆ ಕೊಡಬಾರದು’ ಎಂದರು.

‘ಯಾವ ಕಾರಣಕ್ಕೆ ಕೈಗಾರಿಕೆಗಳು ಕರ್ನಾಟಕದ ಕೈತಪ್ಪುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಯೋಚಿಸಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಮ್ಮನೆ ರಾಜಕೀಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುವುದು ಸರಿಯಲ್ಲ. ಕರ್ನಾಟಕದಲ್ಲಿ ವ್ಯವಸ್ಥೆ ಸರಿ ಇಲ್ಲದಿದ್ದರಿಂದ ಉದ್ಯಮಿಗಳು ಬೇರೆ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಎಲ್ಲಾ ವ್ಯವಸ್ಥೆಯೂ ದೊರೆಯುತ್ತಿದೆ. ಹೀಗಾಗಿ, ಅಲ್ಲಿಗೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ಗ್ಯಾರಂಟಿ ಯೋಜನೆ ಕುರಿತು ಬಿಟ್ಟರೆ, ಈ ಸರ್ಕಾರದವರ ಬಾಯಲ್ಲಿ ಬೇರೇನೂ ಬರುತ್ತಿಲ್ಲ. ಅಭಿವೃದ್ಧಿ ಆಗುತ್ತಿಲ್ಲ. ಗುಂಡಿ ಮುಚ್ಚಲು ಕೂಡ ಇವರ ಬಳಿ ಹಣ ಇಲ್ಲದಂತಾಗಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.