ಮೈಸೂರಿನ ಸಿದ್ಧಾರ್ಥನಗರದ ಬನ್ನೂರು ಮುಖ್ಯರಸ್ತೆಯಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನದ ಕಟ್ಟಡ
ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್
ಮೈಸೂರು: ನಗರದಲ್ಲಿ ಮತ್ತೊಂದು ‘ಗಾಂಧಿ ಭವನ’ ತಲೆಎತ್ತುತ್ತಿದೆ.
ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಬನ್ನೂರು ಮುಖ್ಯರಸ್ತೆಯ ಹೊಸ ಜಿಲ್ಲಾಧಿಕಾರಿ ಕಚೇರಿ ಸಮೀಪ (ಇವಿಎಂಗಳ ದಾಸ್ತಾನು ಕೇಂದ್ರದ ಬಳಿ) ನಿರ್ಮಾಣವಾಗುತ್ತಿರುವ ಗಾಂಧಿಭವನದ ಕಾಮಗಾರಿ ಬಹುತೇಕ ಮುಗಿದಿದ್ದು, ಕೆಲವೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸದ ಕೆಲಸವಷ್ಟೆ ಬಾಕಿ ಇದೆ.
ಈಗಾಗಲೇ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಗಾಂಧಿ ಭವನವಿದೆ. ಗಾಂಧಿ ಅಧ್ಯಯನ ಕೇಂದ್ರದಿಂದ ಅದನ್ನು ಸ್ಥಾಪಿಸಲಾಗಿದೆ. ಗಾಂಧೀಜಿಯ ಫೋಟೊ ಹಾಗೂ ಕಲಾಕೃತಿಗಳು ಅಲ್ಲಿ ಗಮನಸೆಳೆಯುತ್ತಿವೆ. ಅದೇ ರೀತಿಯಲ್ಲೇ ಸಾರ್ವಜನಿಕರನ್ನು ಆಕರ್ಷಿಸುವ ರೀತಿಯಲ್ಲಿ ಗಾಂಧಿ ಭವನವನ್ನು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ‘ಪ್ರೇರಕಶಕ್ತಿ’ಯಾಗಿದ್ದ ರಾಷ್ಟ್ರಪಿತನ ವಿಚಾರಧಾರೆಗಳನ್ನು ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ. ‘ಬಾಪು’ವನ್ನು ಸ್ಮರಿಸುವ ಕೇಂದ್ರವಾಗಿ ಹೊರಹೊಮ್ಮಲಿದೆ.
ಒಂದು ಎಕರೆ ಜಾಗದಲ್ಲಿ: ಒಂದು ಎಕರೆ ಜಾಗವನ್ನು ಒದಗಿಸಲಾಗಿದೆ. ಕಾಂಪೌಂಡ್ ಹಾಕಲಾಗಿದ್ದು, ಒಳಗೆ 100x100 ಅಡಿ ಅಳತೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಗ್ರಂಥಾಲಯ, ವಾಚನಾಲಯ, ವಿವಿಧೋದ್ದೇಶ ಸಭಾಂಗಣ, ತರಬೇತಿ ಕೇಂದ್ರ, ಗಾಂಧಿಯವರ ಜೀವನದ ವಿವಿಧ ಹಂತಗಳ ಫೋಟೊ ಗ್ಯಾಲರಿ, 100 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಚೇರಿಯನ್ನು ಭವನ ಹೊಂದಿದೆ. ಅಂಗವಿಕಲರಿಗೆ ರ‍್ಯಾಂಪ್ ವ್ಯವಸ್ಥೆ ಇರಲಿದೆ. ಕಟ್ಟಡದ ಹಿಂಭಾಗದಲ್ಲಿ ಶೌಚಾಲಯ ಇರುತ್ತವೆ.
ಮುಂಭಾಗದ ಅಂಗಳದಲ್ಲಿ ಹುಲ್ಲುಹಾಸಿನ ನಡುವೆ ಗಾಂಧಿಯವರ ವಿವಿಧ ಕಲಾಕೃತಿಗಳು, ಸ್ವಾತಂತ್ರ್ಯ ಸಂಗ್ರಾಮದ ಫೋಟೊಗಳು ಬರಲಿವೆ. ಅವುಗಳನ್ನು ಸಿದ್ಧಪಡಿಸುವ ಕಾರ್ಯ ನಡೆದಿದೆ. ಗಾಂಧಿ ಪ್ರಿಯರು, ಗಾಂಧಿವಾದಿಗಳು, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರನ್ನು ಆಕರ್ಷಿಸುವಂತೆ ಮಾಡಲು ಯೋಜಿಸಲಾಗಿದೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಂದರೆ 2016–17ರ ಬಜೆಟ್‌ನಲ್ಲಿ ಗಾಂಧೀಜಿಯ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲ ಆಗುವಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಾರ್ತಾ ಇಲಾಖೆ ಮೂಲಕ ತಲಾ ₹3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣದ ಯೋಜನೆಯನ್ನು ಘೋಷಿಸಿದ್ದರು. ಅದರ ನಿರ್ಮಾಣ ಕಾರ್ಯ ಹೋದ ವರ್ಷ ಆಗಸ್ಟ್‌ನಲ್ಲಿ ಆರಂಭಗೊಂಡಿತ್ತು. ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವಾಗಲೇ ಅದರ ಉದ್ಘಾಟನೆ ‘ಭಾಗ್ಯ’ ಕೂಡಿ ಬಂದಿದೆ.
ಬಾಪುವಿನ ಜೀವನ ಸಂದೇಶ ತಿಳಿಸಲು: ‘ಭವನವು ಸಾಂಸ್ಕೃತಿಕ ನಗರಿ, ಅರಮನೆ ನಗರಿ ಎಂಬಿತ್ಯಾದಿ ಹೆಗ್ಗಳಿಕೆಯನ್ನು ಹೊಂದಿರುವ ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿಯಾಗಲಿದೆ. ಗಾಂಧೀಜಿಯ ಚಿಂತನೆ, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸಲಾಗುವುದು. ಅವರ ಸರಳ ಜೀವನದ ಸಂದೇಶ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು, ಮಹಿಳೆಯರು, ಶೋಷಿತರು, ಹಿಂದುಳಿದ ವರ್ಗದವರ ಬಗೆಗೆ ಅವರಿಗಿದ್ದ ಕಾಳಜಿ–ತುಡಿತಗಳನ್ನು ಅನಾವರಣಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ’ ಎನ್ನುತ್ತಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ.
‘ಉದ್ಘಾಟನೆಗೊಂಡ ನಂತರ ಭವನದಲ್ಲಿ ವರ್ಷ ಪೂರ್ತಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲಾಗುವುದು. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಿ ಮಹಾತ್ಮರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಮಾಡಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನೆರಡು ತಿಂಗಳಲ್ಲಿ ಭವನದ ಉದ್ಘಾಟನೆ ಆಗಲಿದೆ. ರಾಷ್ಟ್ರಪಿತ ಗಾಂಧಿ ಅವರನ್ನು ಅರಿಯುವ ಕೇಂದ್ರದೊಂದಿಗೆ ಪ್ರವಾಸಿ ತಾಣವೂ ಆಗಲಿದೆ.–ಹರೀಶ್ ಟಿ.ಕೆ, ಸಹಾಯಕ ನಿರ್ದೇಶಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.