ADVERTISEMENT

ಆರೋಗ್ಯಕರ ಮೈಸೂರು ನಿರ್ಮಾಣಕ್ಕೆ ಸಹಕರಿಸಿ: ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 11:44 IST
Last Updated 12 ಸೆಪ್ಟೆಂಬರ್ 2022, 11:44 IST
   

ಮೈಸೂರು: ‘ವ್ಯಾಪಾರಸ್ಥರು ಮತ್ತು ಗ್ರಾಹಕರು ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವ ಮೂಲಕ, ಆರೋಗ್ಯಕರ ಮೈಸೂರು ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ ಕೋರಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ಮಂಡಿ ಮೊಹಲ್ಲಾದ ಚಿಕ್ಕ ಮಾರ್ಕೆಟ್ ಹಾಗೂ ಸುತ್ತಮುತ್ತ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರಪತ್ರ ಹಾಗೂ ಬಟ್ಟೆ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ಬಳಕೆಯು ರಸ್ತೆಬದಿಯಿಂದ ಶಾಪಿಂಗ್ ಮಾಲ್‌ವರೆಗೂ ನಡೆದಿದೆ. ಇದು, ಪರಿಸರ ನೀತಿಗೆ ವಿರುದ್ಧವಾಗಿದ್ದು ಅಸಮತೋಲನಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಪಾಲಿಕೆಯಿಂದಲೂ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧ ಜಾರಿಯು ಜನಾಂದೋಲನದಿಂದ ಮಾತ್ರ ಸಾಧ್ಯ’ ಎಂದರು.

ADVERTISEMENT

‘ದಸರೆಯನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು’ ಎಂದು ತಿಳಿಸಿದರು.

‘ಗ್ರಾಹಕರು ಬಟ್ಟೆ ಬ್ಯಾಗ್ ಬಳಸಿ ವ್ಯಾಪಾರಿಗಳಿಗೆ ಸಹಕರಿಸಬೇಕು’ ಎಂದು ಕೋರಿದರು.

ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್ ಮಾತನಾಡಿದರು. ಮಂಡಿ ಪೊಲೀಸ್ ಠಾಣೆಯ ಎಸ್‌ಐ ವಿಶ್ವನಾಥ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ , ಸುಚೀಂದ್ರ, ಸದಾಶಿವ, ಹೆಲ್ತ್‌ ಇನ್‌ಸ್ಪೆಕ್ಟರ್ ಬಸವರಾಜು, ಸುಬ್ರಹ್ಮಣ್ಯ, ಕೇಬಲ್ ವಿಜಿ, ಕಿರಣ್, ಚಂದ್ರ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.