ADVERTISEMENT

ಮಕ್ಕಳೊಂದಿಗೆ ಸಂವಾದ: ಶಾಸಕ ಹರೀಶ್ ಗೌಡ ಫುಲ್‌ ಖುಷ್

ಪ್ರಶಸ್ತಿ ಪುರಸ್ಕೃತ ದೇವಗಳ್ಳಿ ಸರ್ಕಾರಿ ಶಾಲೆಗೆ ಹರೀಶ್ ಗೌಡ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 15:38 IST
Last Updated 17 ಆಗಸ್ಟ್ 2023, 15:38 IST
ಹುಣಸೂರು ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಶಾಸಕ ಹರೀಶ್ ಗೌಡ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪಠ್ಯೇತರ ಚಟುವಟಿಕೆ ಪುಸ್ತಕವನ್ನು ವೀಕ್ಷಿಸಿದರು
ಹುಣಸೂರು ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಶಾಸಕ ಹರೀಶ್ ಗೌಡ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪಠ್ಯೇತರ ಚಟುವಟಿಕೆ ಪುಸ್ತಕವನ್ನು ವೀಕ್ಷಿಸಿದರು   

ಹುಣಸೂರು: ‘ಪ್ರತಿ ಮಗು ತನ್ನದೆಯಾದ ಕೌಶಲ ಮತ್ತು ಬುದ್ಧಿ ಶಕ್ತಿ ಹೊಂದಿದ್ದು ಶಿಕ್ಷಕರು ಗುರುತಿಸಿ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹಿಸಿದರೆ ಮಗುವಿನ ಶೈಕ್ಷಣಿಕ ಗುಣಮಟ್ಟ ವೃದ್ಧಿಸುತ್ತದೆ ಎನ್ನುವುದಕ್ಕೆ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ’ ಎಂದು ಶಾಸಕ ಹರೀಶ್ ಗೌಡ ಹೇಳಿದರು.

ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ‘ಗ್ರಾಮೀಣ ಶಾಲೆಗಳಂತೆ ಈ ಶಾಲೆಯೂ ಒಂದಾಗಿದ್ದು, ಆದರೆ ಶಾಲೆಯಲ್ಲಿನ ಶಿಕ್ಷಕ ಸಮೂಹ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆ ಗುಣಮಟ್ಟದಿಂದ ಕೂಡಿದೆ’ ಎಂದರು.

‘ರಾಷ್ಟ್ರಮಟ್ಟದಲ್ಲಿ ನಡೆದ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಸ್ಪರ್ಧೆಯಲ್ಲಿ ಶಾಲೆ ಮಕ್ಕಳು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಇಟ್ಟಿಗೆ ನಿರ್ಮಿಸಿ ಮನೆ ನಿರ್ಮಿಸಿದ ಮಾದರಿಗೆ ಚಿನ್ನದ ಪದಕ ಬಂದಿದೆ. ಜಿಲ್ಲಾ ಉತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಪಡೆದಿರುವುದು ಕ್ಷೇತ್ರದ ಹೆಮ್ಮೆಯ ವಿಷಯ. ಗ್ರಾಮೀಣ ಪರಿಸರದಲ್ಲಿನ ಮಕ್ಕಳನ್ನು ಗುರುತಿಸಿ ಬೆನ್ನು ತಟ್ಟಿದರೆ ಸಾಧನೆ ಸಾಧ್ಯ ಎನ್ನಲು ಈ ಶಾಲೆಯೇ ಮಾದರಿ’ ಎಂದರು.

ADVERTISEMENT

‘ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದು, ಅದಕ್ಕೆ ಪೂರಕವಾದ ಸಿದ್ಧತೆ ನಡೆಸಲಾಗಿದೆ. ಗ್ರಾಮೀಣ ಭಾಗದ ಪ್ರವಾಸದಲ್ಲಿ ಆ ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಗು ಹೋಗುಗಳನ್ನು ತಿಳಿದುಕೊಳ್ಳಲಿದ್ದೇನೆ. ದೇವಗಳ್ಳಿ ಶಾಲಾ ಮಕ್ಕಳ ವಿಜ್ಞಾನ, ಕೃಷಿ ಮತ್ತು ಆಯುರ್ವೇದ ಔಷಧಿ ಉದ್ಯಾನ ಈ ಎಲ್ಲಾ ವಿಷಯದಲ್ಲೂ ಪರಿಪೂರ್ಣತೆ ಹೊಂದಿರುವುದು ಖುಷಿ ತಂದಿದೆ’ ಎಂದರು.

ಮಕ್ಕಳು ಹೊರ ತರುವ ಮಾಸಪತ್ರಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷೆ ಮಂಗಳಾ, ರೇಣುಕಾ, ಶಾಂತಾ, ವಸಂತ, ಮಂಜುಳಾ, ಮುಖಂಡರಾದ ಬಸವರಾಜೇ ಅರಸು, ನಾಗರಾಜೇ ಅರಸು, ವೀರರಾಜೇ ಅರಸು ಮತ್ತು ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.