ಹುಣಸೂರು: ಕರ್ತವ್ಯಲೋಪದ ಕಾರಣಕ್ಕೆ ಸಹಕಾರ ಸಂಘಗಳ ಕಾರವಾರದ ಉಪನಿಬಂಧಕ ನಿಬಂಧಕ ಆರ್. ಮಂಜುನಾಥ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ.
ಅಧಿಕಾರಿಯು ಮೈಸೂರಿನಲ್ಲಿ ಉಪನಿಬಂಧಕರಾಗಿದ್ದ ಅವಧಿಯಲ್ಲಿ ಮೈಸೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಅಲ್ಲಿನ ಜೆ.ಪಿ.ನಗರದ ಬ್ರಾಹ್ಮಣರ ಸಂಘ ಮತ್ತು ಸಹಾಯಕ ನಿಬಂಧಕರಾಗಿದ್ದ ಅವಧಿಯಲ್ಲಿ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿತ್ತೆನ್ನಲಾದ ಅವ್ಯಹವಾರಗಳ ಬಗ್ಗೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಸರಸ್ವತಿಪುರಂ ನಿವಾಸಿ ಎಚ್.ತೇಜಸ್ವಿ ದೂರು ನೀಡಿದ್ದರು.
‘ಗೃಹನಿರ್ಮಾಣ ಸಹಕಾರ ಸಂಘದ ಪ್ರಕರಣದಲ್ಲಿ ರಿಟ್ ಅರ್ಜಿದಾರರನ್ನು ಹೊರತುಪಡಿಸಿ, ಆಡಳಿತ ಮಂಡಳಿಯ 2024–2025ರ ನಿರ್ದಿಷ್ಟ ಅವಧಿಯ ಆರೋಪಿತ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿ ವಿಫಲರಾಗಿದ್ದಾರೆ. ಬ್ರಾಹ್ಮಣ ಸಂಘದ ಅವ್ಯವಹಾರ ಕುರಿತ ದೂರು ಅರ್ಜಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲರಾಗಿದ್ದಾರೆ. ಭೇರ್ಯ ಪ್ರಕರಣದಲ್ಲಿ, ಸಹಕಾರ ಸಂಘಗಳ ಕಾಯ್ದೆ ಉಲ್ಲಂಘಿಸಿ ಬೈಲಾ ತಿದ್ದುಪಡಿಗೆ ನಿಯಮಬಾಹಿರವಾಗಿ ಅನುಮೋದನೆ ನೀಡಿದ್ದಾರೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಅ.4ರಂದು ಅಮಾನತು ಆದೇಶ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.