ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಸದನದಲ್ಲಿ ಸಹಕಾರಿ ವಿಷಯವಾಗಿ ಚರ್ಚಿಸಿದ ದೃಶ್ಯ
ಹುಣಸೂರು: ‘ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಮತ್ತು ರಾಜಕೀಯ ಹಸ್ತಕ್ಷೇಪ ಇರಬಾರದು. ಇದರಿಂದ ಸಹಕಾರ ತತ್ವ ಸಿದ್ದಾಂತಕ್ಕೆ ಧಕ್ಕೆ ಆಗಲಿದೆ’ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಸಂಬಂಧ ಮಾತನಾಡಿ, ‘ವಿಧೇಯಕ ತಿದ್ದುಪಡಿ 2024ರಲ್ಲೇ ಬಂದಿದ್ದು, ಕೆಲವು ತಿದ್ದುಪಡಿ ಮಾಡಿ ಮತ್ತೆ ಸದನಕ್ಕೆ ತರಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವುದನ್ನು ಸ್ವಾಗತಿಸುತ್ತೇನೆ. ಆದರೆ, ಯಾವ ರೀತಿಯಲ್ಲಿ ಮೀಸಲಾತಿ ಅನುಷ್ಠಾನಕ್ಕೆ ತರಲಾಗುವುದು ಎಂಬ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದರು.
‘ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಮೀಸಲಾತಿ ಜಾರಿಯಲ್ಲಿದ್ದು, ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರವು ಸಹಕಾರಿ ಸಂಘಗಳಿಗೆ ಅನುದಾನ ನೀಡದೆ, ಸಹಕಾರ ಕ್ಷೇತ್ರದಲ್ಲಿ ಮೀಸಲಾತಿಯನ್ನು ಯಾವ ಆಧಾರದಲ್ಲಿ ಅನುಷ್ಟಾನಕ್ಕೆ ತರಲಿದೆ’ ಎಂದು ಪ್ರಶ್ನಿಸಿದರು.
ಶಾಸಕರ ಪ್ರಶ್ನೆಗೆ ಸಹಕಾರಿ ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿ, 'ಸಹಕಾರಿ ಕ್ಷೇತ್ರ ರೈತರಿಗೆ ಸೀಮಿತವಾಗುವ ಬದಲಿಗೆ ಮೀಸಲಾತಿಯಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.