ADVERTISEMENT

ಕೋವಿಡ್‌ನಿಂದ ಮತ್ತಷ್ಟು ಮಂದಿ ಗುಣಮುಖ

ಹೆಚ್ಚುತ್ತಲೇ ಇದೆ ಮೃತರ ಸಂಖ್ಯೆ–ಮತ್ತೆ 500ರ ಗಡಿ ದಾಟಿದ ಸೋಂಕಿತರ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 5:08 IST
Last Updated 13 ಆಗಸ್ಟ್ 2020, 5:08 IST
ಮೈಸೂರಿನ ಚಿಕ್ಕಗಡಿಯಾರದ ಬಳಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವ ಕೊಡಲು ಬುಧವಾರ ಸಾಲುಗಟ್ಟಿ ನಿಂತಿದ್ದ ಜನ
ಮೈಸೂರಿನ ಚಿಕ್ಕಗಡಿಯಾರದ ಬಳಿ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವ ಕೊಡಲು ಬುಧವಾರ ಸಾಲುಗಟ್ಟಿ ನಿಂತಿದ್ದ ಜನ   

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕೋವಿಡ್‌–19ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಬುಧವಾರ ಪ್ರಕಟಿಸಿರುವ ಪಟ್ಟಿ ಪ್ರಕಾರ 668 ಮಂದಿ ಗುಣಮುಖರಾಗಿದ್ದಾರೆ.

ಇದುವರೆಗೆ 4,781 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮತ್ತೆ 544 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಕೋವಿಡ್‌ ಬಾಧಿತರ ಸಂಖ್ಯೆ ಎಂಟು ಸಾವಿರ ಗಡಿ ದಾಟಿದೆ. ಜಿಲ್ಲೆಯ ವಿವಿಧೆಡೆ ಮತ್ತೆ 97 ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯಗಳೆಂದು ಘೋಷಿಸಿ ಸೀಲ್‌ಡೌನ್‌ ಮಾಡಲಾಗಿದೆ.

ಮೂವರು ಯುವಕರು ಸಾವು: 11 ಮಂದಿ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತದ ಪಟ್ಟಿಯಲ್ಲಿ ನಮೂದಿಸಲಾಗಿದೆ. ಇವರೆಲ್ಲರೂ ಬೇರೆ ಬೇರೆ ದಿನ ಮೃತಪಟ್ಟವರು. ಅವರಲ್ಲಿ 23 ವರ್ಷದ ಇಬ್ಬರು ಯುವಕರು, 18 ವರ್ಷದ ಯುವಕ, 45, 55, 56 ವರ್ಷದ ಪುರುಷರು, 60, 66, 68, 70, 82 ವರ್ಷದ ವೃದ್ಧರು ಮೃತರು. ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 262 ಆಗಿದೆ.

ADVERTISEMENT

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 227, ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ 75, ಕೋವಿಡ್‌ ಕೇರ್‌ ಕೇಂದ್ರದಲ್ಲಿ 757, ಖಾಸಗಿ ಕೋವಿಡ್‌ ಕೇರ್‌ ಕೇಂದ್ರದಲ್ಲಿ 89 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 175 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಇದುವರೆಗೆ 2,101 ಮಂದಿಯನ್ನು ಮನೆಯಲ್ಲೇ ಐಸೊಲೇಷನ್‌ ಮಾಡಲಾಗಿದೆ.

ಪ್ರವಾಸ ಹಿನ್ನೆಲೆ ಹೊಂದಿದ್ದು, ಸೋಂಕಿತರಾಗುತ್ತಿರುವವ ಸಂಖ್ಯೆ ಹೆಚ್ಚುತ್ತಲೇ ಇದೆ. ಇತರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದ 130 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದು ಅದಕ್ಕೆ ಸಾಕ್ಷಿ. ಪ್ರಾಥಮಿಕ ಸಂಪರ್ಕಿತ 285 ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿದ್ದ 112 ಮಂದಿ, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದ 17 ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.

ಒಟ್ಟು 58,866 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದುವರೆಗೆ 23,529 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.