ADVERTISEMENT

ಮರೀಚಿಕೆಯಾದ ಕೋವಿಡ್ ಪರಿಹಾರ

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:28 IST
Last Updated 20 ಅಕ್ಟೋಬರ್ 2020, 15:28 IST

ಮೈಸೂರು: ‘ಕೋವಿಡ್‌ ಕರ್ತವ್ಯದಲ್ಲಿದ್ದಾಗ ಸೋಂಕು ತಗುಲಿ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟವರಿಗೆ ₹ 50 ಲಕ್ಷ ಪರಿಹಾರ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಪರಿಹಾರ ತಲುಪಿರುವುದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ. ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಕಿಡಿಕಾರಿದರು.

‘600 ಕೊರೊನಾ ವಾರಿಯರ್ಸ್‌ಗಳು ಮೃತಪಟ್ಟರೂ, 13 ಜನರಿಗೆ ಮಾತ್ರ ಪರಿಹಾರ ಕೊಡಲಾಗಿದೆ. ವಿಮಾ ಕಂಪನಿ ತಕರಾರು ತೆಗೆದಿರುವುದರಿಂದ ಕೋವಿಡ್ ಯೋಧರಿಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಎರಡು ವರ್ಷದಲ್ಲಿ ₹ 48 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರದಿಂದ ಬಂದಿರುವ ಪರಿಹಾರ ₹ 2 ಸಾವಿರ ಕೋಟಿ ಮಾತ್ರ. ಪ್ರಧಾನಿ ಮೋದಿ ಆಂಧ್ರಪ್ರದೇಶಕ್ಕೆ ವ್ಯಕ್ತಪಡಿಸಿದಂತೆ ನಮ್ಮ ಬಗ್ಗೆ ಸಹಾನುಭೂತಿಯನ್ನೂ ವ್ಯಕ್ತಪಡಿಸಿಲ್ಲ. ಟ್ವೀಟ್ ಕೂಡ ಮಾಡಿಲ್ಲ’ ಎಂದು ಕಿಡಿಕಾರಿದರು.

ADVERTISEMENT

ಅನವಶ್ಯಕ: ‘ಜಿಲ್ಲಾಧಿಕಾರಿ ಬದಲಾವಣೆ ಮಾಡಿದ್ದು ಅನವಶ್ಯಕ. ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೂ ಅಭಿರಾಂ ಜಿ.ಶಂಕರ್ ಅವರನ್ನೇ ಮುಂದುವರೆಸಬೇಕಿತ್ತು. ಆದರೆ ಸರ್ಕಾರ ಎರಡು ಬಾರಿ ಬದಲಾಯಿಸಿತು. ಅವರು ಯಾರನ್ನೂ ಕೇಳದೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಿದ್ದರು. ಮಾರನೆ ದಿನವೇ ಮುಖ್ಯಮಂತ್ರಿ ನಿರ್ಬಂಧ ತೆರವು ಮಾಡಿದರು. ಅವರಲ್ಲೇ ಇಷ್ಟು ಗೊಂದಲವಿದೆ’ ಎಂದು ಲಕ್ಷ್ಮಣ್‌ ಲೇವಡಿ ಮಾಡಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.