ADVERTISEMENT

ಮೈಸೂರು | ಬೆಳೆ ನಷ್ಟ: ಪರಿಹಾರಕ್ಕಾಗಿ ರೈತರ ಅಲೆದಾಟ

ಎಂ.ಮಹೇಶ
Published 23 ಡಿಸೆಂಬರ್ 2024, 5:02 IST
Last Updated 23 ಡಿಸೆಂಬರ್ 2024, 5:02 IST
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಭತ್ತದ ಬೆಳೆ ಜಲಾವೃತಗೊಂಡಿದೆ
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಭತ್ತದ ಬೆಳೆ ಜಲಾವೃತಗೊಂಡಿದೆ   

ಮೈಸೂರು: ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ ಹಾಗೂ ಚಂಡಮಾರುತದ ಕಾರಣದಿಂದ ಉಂಟಾದ ಪ್ರತಿಕೂಲ ಪರಿಣಾಮದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಇನ್ನೂ ಪರಿಹಾರ ದೊರೆತಿಲ್ಲ ಎಂಬ ದೂರುಗಳಿವೆ.

ಪರಿಹಾರಕ್ಕಾಗಿ ಅವರು ನಾಡಕಚೇರಿ ಮೊದಲಾದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು, ಸಿಬ್ಬಂದಿ–ಅಧಿಕಾರಿಗಳನ್ನು ಸಂಪರ್ಕಿಸುವುದು ನಡೆಯುತ್ತಲೇ ಇದೆ. ಆದರೆ, ಅವರ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿಲ್ಲ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಹಿತಿ ನೀಡಿ, ಸಮೀಕ್ಷೆ ನಡೆದು ವರದಿ ಸಲ್ಲಿಕೆಯಾಗಿದ್ದರೂ ಪರಿಹಾರದ ಹಣ ದೊರೆಯುವುದು ಅವರನ್ನು ಸಂಕಷ್ಟಕ್ಕೆ ದೂಡಿದೆ. ಸಿಗುವ ಪರಿಹಾರದಿಂದ ಆರ್ಥಿಕವಾಗಿ ಸಹಾಯ ಆಗಬಹುದೆಂದು ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ 42ರಷ್ಟು ಜಾಸ್ತಿ ಮಳೆಯಾಗಿತ್ತು. ಜೂನ್‌ 1ರಿಂದ ಆ.31ರವರೆಗೆ ಅತಿವೃಷ್ಟಿಯಿಂದಾಗಿ 473.6 ಹೆಕ್ಟೇರ್‌ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ಹಾನಿಗೊಳಗಾದ ಬೆಳೆಗಳಿಗೆ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಪಾವತಿಸಲು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದರು.

ADVERTISEMENT

ಮಾನದಂಡದ ಪ್ರಕಾರ: ಜಂಟಿ ಸಮೀಕ್ಷೆಯ ವಿವರವನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ, ರೈತ ಸಂ‍ಪರ್ಕ ಕೇಂದ್ರಗಳಲ್ಲಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದರು. ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ 7,300 ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. ನಷ್ಟ ಅನುಭವಿಸಿದವರಿಗೆ ಮಾನದಂಡಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಸರ್ಕಾರ ತಿಳಿಸಿತ್ತು.

‘ಪ್ರವಾಹ–ಅತಿವೃಷ್ಟಿಯಿದ ಬಾಳೆ ಮೊದಲಾದ ಬೆಳೆಗಳು, ಪ್ರವಾಹ ಬಂದಾಗ ನದಿಪಾತ್ರದಲ್ಲಿ ಭತ್ತ ಹಾಗೂ ಮತ್ತೆ ಅತಿಯಾಗಿ ಮಳೆಯಾದಾಗ ನೆಲಗಡಲೆ, ಈಚೆಗೆ ‘ಫೆಂಜಲ್’ ಚಂಡಮಾರುತದಿಂದಾಗಿ ಭತ್ತ ಹಾಗೂ ರಾಗಿ ಬೆಳೆಗೆ ಹಾಳಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿ ತೊಂದರೆಯಾಯಿತು. ಆದರೆ, ಪರಿಹಾರ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಅವರೆ, ತೊಗರಿ, ರಾಗಿ, ಮುಸುಕಿನಜೋಳ ಬೆಳೆ ನಷ್ಟ ಅನುಭವಿಸಿದ ರೈತರಿಗೆ ನೆರವಾಗಿಲ್ಲ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.

ವೈಜ್ಞಾನಿಕವಾಗಿರಬೇಕು:

‘ಕೆಲವರಿಗೆ ಪರಿಹಾರ ಸಿಕ್ಕಿದ್ದರೂ ಅದು ಅತ್ಯಲ್ಪ ಪ್ರಮಾಣದ್ದಾಗಿದೆ. ಭಿಕ್ಷೆ ಕೊಡುವ ರೀತಿಯಲ್ಲಿ ಕೊಡುತ್ತಿರುವುದು ಸರಿಯಲ್ಲ. ಕಾಲಕಾಲಕ್ಕೆ ಮಾನದಂಡಗಳನ್ನು ಪರಿಷ್ಕರಿಸಿ ವೈಜ್ಞಾನಿಕವಾಗಿ ಪರಿಹಾರ ಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಭಾಗದಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಬಹುತೇಕ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಹಾಳಾಗಿದ್ದವು. ಭತ್ತ, ಬಾಳೆ, ಶುಂಠಿ ಮೊದಲಾದ ಬೆಳೆಗಳು ಹಾನಿಗೀಡಾಗಿದ್ದವು. ಇದರಿಂದಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಕೃಷಿಕರದಾಗಿತ್ತು. ಭತ್ತ ಕೊಯ್ಲಿಗೆ ಬಂದಾಗ ಜಮೀನು ಜಲಾವೃತವಾಗಿದ್ದರಿಂದ, ಅನೇಕರು ತೊಂದರೆ ಅನುಭವಿಸಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ನೆರವಿಗಾಗಿ ಕಾದಿದ್ದಾರೆ.

ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಲಭ್ಯವಾಗಲಿಲ್ಲ.

ಕಪಿಲಾ ನದಿ ಪ್ರವಾಹದಿಂದ ಬೊಕ್ಕಹಳ್ಳಿಯಲ್ಲಿ ಒಟ್ಟು ನಮ್ಮ ಕುಟುಂಬದ ಎಂಟೂವರೆ ಎಕರೆ ಬೆಳೆ ಹಾನಿಯಾಗಿತ್ತು. ಭತ್ತದ ಒಟ್ಟಲು ಹಾಕಿದ್ದೆವು. ಅದೆಲ್ಲವೂ ಹಾಳಾಯಿತು. ಆದರೆ ಪರಿಹಾರ ಬರಲಿಲ್ಲ
ಬೊಕ್ಕಹಳ್ಳಿ ನಂಜುಂಡಸ್ವಾಮಿ ರೈತ ಮುಖಂಡ
ಜಿಲ್ಲೆಯಲ್ಲಿ ಇನ್ನೂ ಬಹಳಷ್ಟು ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಸರ್ಕಾರ ಕೊಟ್ಟಿಲ್ಲ. ವೈಜ್ಞಾನಿಕವಾಗಿ ಪರಿಹಾರ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅಧ್ಯಕ್ಷ ರಾಜ್ಯ ಕಬ್ಬು ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.