ಹುಣಸೂರು: ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಕರಾಳ ದಿನಕ್ಕೆ ದೇಶವನ್ನು ದೂಡಿದ ಇಂದಿರಾ ಕಾಂಗ್ರೆಸ್, ಇಂದು ಸ್ವಾರ್ಥಕ್ಕೆ ಸಂವಿಧಾನ ಪುಸ್ತಕ ಹಿಡಿದು ದೇಶ ಪರ್ಯಟನೆ ನಡೆಸುತ್ತಿರುವುದು ದುರಂತದ ಸಂಗತಿ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ವಿಭಾಗ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ರಾಜಕೀಯ ಆಟಕ್ಕೆ ಬಳಸಿಕೊಂಡು ಸಂವಿಧಾನವನ್ನು ತನ್ನ ಚೌಕಟ್ಟಿಗೆ ತಕ್ಕಂತೆ ತಿದ್ದುಪಡಿ ಮಾಡಿ ತುರ್ತು ಪರಿಸ್ಥಿತಿಯಲ್ಲಿ ಮೆರೆದಿದ್ದರು. ಸಾರ್ವಭೌಮತ್ವ ಸಿದ್ಧಾಂತಕ್ಕೆ ಬೆಂಕಿ ಹಚ್ಚಿ ಸಂವಿಧಾನದ ತತ್ವ ಸಿದ್ಧಾಂತ ಮೂಲೆಗುಂಪು ಮಾಡಿದ್ದರು’ ಎಂದು ದೂರಿದರು.
‘1975ರಲ್ಲಿ ಇಂದಿರಾಗಾಂಧಿ ಭಾರತೀಯ ಸಂವಿಧಾನವನ್ನು ಇಂದಿರಾ ಸಂವಿಧಾನವನ್ನಾಗಿ ಮಾರ್ಪಾಡು ಮಾಡಿಕೊಂಡು ಹಲವು ಕಾಯ್ದೆಗಳಿಗೆ ತಿದ್ದುಪಡಿ ತಂದರು. ಸಂವಿಧಾತ್ಮಕವಾಗಿ ಆಂಬೇಡ್ಕರ್ ನೀಡಿದ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಏಕಚಕ್ರಾಧಿಪತ್ಯ ಆಡಳಿತ ನಡೆಸಿದರು. ಇಂದು ಸಂವಿಧಾನ ಪೀಠಿಕೆ ಓದಿ ಪ್ರಮಾಣ ಸ್ವೀಕರಿಸಿ ಸಂವಿಧಾನದ ಪಾವಿತ್ರತೆಗೆ ಧಕ್ಕೆ ತಂದಿದ್ದಾರೆ’ ಎಂದು ಕಿಡಿಕಾರಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಕೆಲವು ವರ್ಷಗಳು ಕಾಂಗ್ರೆಸೇತರ ರಾಜಕೀಯ ಪಕ್ಷ ಆಡಳಿತ ನಡೆಸಿದೆ. ಉಳಿದಂತೆ ಕಾಂಗ್ರೆಸ್ ಆಡಳಿತ ನಡೆಸಿ ಸಂವಿಧಾನವನ್ನು ಮನಸೋಯಿಚ್ಛೆ ಬದಲಿಸಿದೆ. ದೇಶದ ಪರಿಸ್ಥಿತಿ ಕಾಲಕ್ಕೆ ತಕ್ಕಂತೆ ಬದಲಾಗಿದ್ದರೂ, ಕಾಂಗ್ರೆಸ್ ಮನಸ್ಥಿತಿ ಬದಲಾಗದೆ ಸಂವಿಧಾನ ಪುಸ್ತಕ ಹಿಡಿದು ಮತದಾರನನ್ನು ಓಲೈಸುವ ನಾಟಕವಾಡಿದೆ’ ಎಂದರು.
ಬಿಜೆಪಿ ಮುಖಂಡ ಎನ್.ಮಹೇಶ್ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇದ್ದಲ್ಲಿ ಆಡಳಿತ ಪಕ್ಷಕ್ಕೆ ಗೌರವ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ₹50 ಕೋಟಿ ಅನುದಾನ ನೀಡಿದ್ದು, ವಿರೋಧ ಪಕ್ಷದವರಿಗೆ ಖಾಲಿ ಕೈ. ಇದು ರಾಜ್ಯದಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆ’ ಎಂದು ಹರಿಹಾಯ್ದರು.
‘ಕಾಂಗ್ರೆಸ್ ಸಿದ್ಧಾಂತ ಆ ಪಕ್ಷದಲ್ಲಿರುವವರಿಗೆ ತಿಳಿಯದಾಗಿದೆ. ಮೈಸೂರಿನಲ್ಲಿ ಸಾಧನ ಸಮಾವೇಶ ನಡೆದಿದ್ದು, ಕಳೆದ 2 ವರ್ಷದಲ್ಲಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ನೀಡಿದ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಕಟ್ಟಿಹಾಕಿ ಆಡಳಿತ ನಡೆಸಿದ್ದರು. ಆ ಕರಾಳ ದಿನದಲ್ಲಿ 245 ಪತ್ರಕರ್ತರನ್ನು ಜೈಲಿಗೆ ಕಳುಹಿಸಿದ್ದರು. ನ್ಯಾಯಾಲಯಗಳು ಯಾವುದೇ ಸರ್ಕಾರಿ ಕ್ರಮ ಪ್ರಶ್ನಿಸುವಂತಿರಲಿಲ್ಲ. ಈ ಎಲ್ಲದಕ್ಕೂ ಮತದಾರ 1977ರಲ್ಲಿ ಕಾಂಗ್ರೆಸ್ ಸೋಲಿಸಿ ಉತ್ತರ ನೀಡಿದರು’ ಎಂದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಹರ್ಷವರ್ಧನ್, ನಾಗೇಂದ್ರ ಮಾತನಾಡಿದರು.
ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕುಂಬ್ರಾಳ ಸುಬ್ಬಣ್ಣ, ಬಸವರಾಜಪ್ಪ, ಮಹದೇವಯ್ಯ, ಮಂಗಳ ಸೋಮಶೇಖರ್, ಸೋಮಶೇಖರ್, ಗಣೇಶ್ ಕುಮಾರಸ್ವಾಮಿ, ಚಂದ್ರಶೇಖರ್, ಪ್ರಫುಲ್ಲ ಮಲ್ಲಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.