ADVERTISEMENT

ಎಸ್‌ಡಿಪಿಐ –ಕಾಂಗ್ರೆಸ್‌ ವಾಟ್ಸ್‌ಆ್ಯಪ್‌ ಚಾಟ್‌ನಿಂದ ಸಂಚು ಬಯಲು: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 9:41 IST
Last Updated 15 ಅಕ್ಟೋಬರ್ 2020, 9:41 IST
 ಸಿ.ಟಿ.ರವಿ
ಸಿ.ಟಿ.ರವಿ    

ಮೈಸೂರು: ‘ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಗಲಭೆಗೆ ಕಾಂಗ್ರೆಸ್‌ ರೂಪಿಸಿದ ಸಂಚನ್ನು ಈ ಪಕ್ಷ ಹಾಗೂ ಎಸ್‌ಡಿಪಿಐ ಮುಖಂಡರ ನಡುವಿನ ವಾಟ್ಸ್ಆ್ಯಪ್‌ ಚಾಟ್‌ ಬಯಲುಗೊಳಿಸಿದ್ದು, ಪೂರಕ ಸಾಕ್ಷ್ಯ ಒದಗಿಸಿದೆ. ಅದನ್ನು ಆಧರಿಸಿ ಪೊಲೀಸರು ವರದಿ ನೀಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುರುವಾರ ಇಲ್ಲಿ ತಿಳಿಸಿದರು.

‘ಕಾಂಗ್ರೆಸ್‌ನ ಒಳ ರಾಜಕೀಯ ಹಾಗೂ ಎಸ್‌ಡಿಪಿಐನ ಮತಾಂಧತೆ ಗಲಭೆಗೆ ಕಾರಣ. ನಾವು ಏಕೆ ಕಾಂಗ್ರೆಸ್‌ನವರನ್ನು ಪ್ರಕರಣದಲ್ಲಿ ಸಿಲುಕಿಸಬೇಕು?’ ಎಂದರು.

‘ರಾಜಕೀಯ ಕಾರಣಗಳಿಗಾಗಿ ಸಮಾಜಘಾತುಕ ಶಕ್ತಿಗಳನ್ನು ಬೆಳೆಸುವ, ಅವರ ಹೆಸರಿನಲ್ಲಿ ವೋಟ್‌ಬ್ಯಾಂಕ್‌ ಸೃಷ್ಟಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ಸುಟ್ಟು ಹಾಕಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತಿತ್ತು. ರಾಹುಲ್ ಗಾಂಧಿ ಬಂದು ಬಟ್ಟೆ ಹರಿದುಕೊಳ್ಳುತ್ತಿದ್ದರು. ತಮ್ಮ ಪಕ್ಷದ ದಲಿತ ಶಾಸಕನ ಮನೆಯನ್ನು ಸುಟ್ಟು ಹಾಕಿದರೂ ಚಕಾರ ಎತ್ತಲಿಲ್ಲ’ ಎಂದು ಟೀಕಿಸಿದರು.

ADVERTISEMENT

‘‍ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ವಿಚಾರ ಬಂದಾಗ ಕಾಂಗ್ರೆಸ್‌ನವರು ಪರಿಶಿಷ್ಟ ಜಾತಿಯವರನ್ನು ಕೈಬಿಟ್ಟು, ಅಲ್ಪಸಂಖ್ಯಾತರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಗಲಭೆಯಿಂದ ಸ್ಪಷ್ಟವಾಗಿದೆ. ಹಾಗೆಯೇ, ಪರಿಶಿಷ್ಟ ಜಾತಿಯವರನ್ನು ಬೇರೆಯವರ ಮೇಲೆ ಎತ್ತಿಕಟ್ಟಲು ಬಳಸಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.

ಉಪಚುನಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕುರಿತು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರ ಬಗ್ಗೆ ಇರುವ ದ್ವೇಷ, ಸಂಕಷ್ಟವನ್ನು ವಿವಿಧ ಸ್ವರೂಪಗಳಲ್ಲಿ ಶಿವಕುಮಾರ್ ತೋಡಿಕೊಳ್ಳುತ್ತಿದ್ದಾರೆ. ಸದನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಪಾದನೆ ಮಾಡಿದಾಗ ಅದನ್ನು ನಂಬುವುದಿಲ್ಲವೆಂದು ಅವರದೇ ಪಕ್ಷದ ಅಧ್ಯಕ್ಷ ಶಿವಕುಮಾರ್ ಹೇಳಿದ್ದರು. ಒಂದೇ ಪಕ್ಷದಲ್ಲಿ ಇಷ್ಟೊಂದು ದ್ವೇಷ ಇರಬಾರದು’ ಎಂದರು.

ಉಪಚುನಾವಣೆಯಲ್ಲಿ ಮೂಲ ಬಿಜೆಪಿಯವರಿಗೆ ಟಿಕೆಟ್‌ ಸಿಗದ ಬಗ್ಗೆ, ‘ಮೂಲ ಬಿಜೆಪಿಯವರೇ ಪ್ರಧಾನಿ, ಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ವಿಚಾರ ಒಪ್ಪಿಕೊಂಡು ಪಕ್ಷಕ್ಕೆ ಬಂದ ಮೇಲೆ ನಮ್ಮವರೇ ಆಗುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.