ADVERTISEMENT

ಡಿ.ಸಿ ನೇತೃತ್ವದ ‘ಸ್ಪಂದನ’ ರದ್ದು

ಶಾಸಕರ ಸಹಕಾರದೊಂದಿಗೆ ಕೆಲಸ ಮಾಡಬೇಕು: ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 2:54 IST
Last Updated 1 ಡಿಸೆಂಬರ್ 2020, 2:54 IST
ಆರ್‌.ಅಶೋಕ
ಆರ್‌.ಅಶೋಕ   

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರ ನಡುವಿನ ಜಟಾಪಟಿ ಬೆನ್ನಲೇ,‘ಸ್ಪಂದನ’ ಕಾರ್ಯಕ್ರಮ ರದ್ದುಪಡಿಸಲು ಕಂದಾಯ ಸಚಿವ ಆರ್‌.ಅಶೋಕ ಸೂಚನೆ ನೀಡಿದ್ದಾರೆ.

‘ಇಬ್ಬರು ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರೊಬ್ಬರಆರೋಪ, ಜಿಲ್ಲಾಧಿಕಾರಿಪತ್ರ ವ್ಯವಹಾರ ಗಮನಿಸಿದ್ದೇನೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಕೂಡ ನನ್ನೊಂದಿಗೆ ಮಾತನಾಡಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿನನ್ನನ್ನುಭೇಟಿ ಮಾಡಿ ಚರ್ಚಿಸಿದ್ದಾರೆ. ಸ್ಪಂದನ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ್ದೇನೆ’ ಎಂದು ಸಚಿವ ಆರ್‌.ಅಶೋಕ ಅವರು ಸೋಮವಾರ ಇಲ್ಲಿ ಹೇಳಿದರು.

ಕೆ.ಆರ್‌.ನಗರ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿ ಹಮ್ಮಿಕೊಂಡಿರುವ ಸ್ಪಂದನ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ,ಮಾಹಿತಿಕೂಡ ರವಾನಿಸಿಲ್ಲ ಎಂದು ಈಚೆಗೆ ಜೆಡಿಎಸ್‌ ಶಾಸಕಸಾ.ರಾ.ಮಹೇಶ್‌ ಆರೋಪಿಸಿದ್ದರು.

ADVERTISEMENT

‘ಜನಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಯಾವ ರೀತಿ ನಡೆದುಕೊಳ್ಳಬೇಕು, ಜಿಲ್ಲಾಧಿಕಾರಿಗೆ ಜನಪ್ರತಿನಿಧಿಗಳು ಯಾವ ರೀತಿ ಗೌರವ ಕೊಡಬೇಕು ಎಂಬ ವಿಚಾರವಾಗಿ ತಿಳಿ ಹೇಳಿದ್ದೇನೆ. ಜಿಲ್ಲಾಧಿಕಾರಿಯಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ, ಜನರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ಕೆಲಸ ಮಾಡಬೇಕು. ಸ್ಪಂದನ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸದೇ ಇರುವುದು, ಗೌರವ ಕೊಡದೇ ಇರುವ ದೂರುಗಳು ಬಂದಿವೆ. ಹೀಗಾಗಿ, ಶಿಷ್ಟಾಚಾರದಂತೆ ಶಾಸಕರಿಗೆ ಸಮಯ ನೀಡಿ, ಆಹ್ವಾನಿಸಿ ಗೌರವ ನೀಡಬೇಕು’ ಎಂದರು.

ಈ ಹಿಂದೆ ರೂಪಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಕೋವಿಡ್‌–19 ಕಾರಣ ಸ್ಥಗಿತಗೊಂಡಿದ್ದು, ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದು. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಸಂಬಂಧ ಮಾರ್ಗಸೂಚಿ ರಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.