ADVERTISEMENT

ಉತ್ತಮ ಪರಿಸರ ಮುಂದಿನ ಪೀಳಿಗೆಗೂ ಉಳಿಸೋಣ: ಡಿ. ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 10:37 IST
Last Updated 13 ಜುಲೈ 2022, 10:37 IST
25ಸಾವಿರ ಸಸಿ ನೆಡುವ ‘ವನಸಿರಿ’–ವನಮಹೋತ್ಸವ ಕಾರ್ಯಕ್ರಮಕ್ಕೆ ಡಿ. ವೀರೇಂದ್ರ ಹೆಗ್ಗಡೆ ಚಾಲನೆ.
25ಸಾವಿರ ಸಸಿ ನೆಡುವ ‘ವನಸಿರಿ’–ವನಮಹೋತ್ಸವ ಕಾರ್ಯಕ್ರಮಕ್ಕೆ ಡಿ. ವೀರೇಂದ್ರ ಹೆಗ್ಗಡೆ ಚಾಲನೆ.   

ಮೈಸೂರು: ‘ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸಬೇಕು. ಈ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು’ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ರಾಜೀವ್‌ ಸ್ನೇಹ ಬಳಗದ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ 25ಸಾವಿರ ಸಸಿ ನೆಡುವ ‘ವನಸಿರಿ’–ವನಮಹೋತ್ಸವ ಕಾರ್ಯಕ್ರಮಕ್ಕೆ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದ ಆವರಣದಲ್ಲಿ ಸಸಿ ನೆಟ್ಟು ಬುಧವಾರ ಚಾಲನೆ ನೀಡಿ, ಬಳಿಕ ನಡೆದ ವೇದಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾವೆಲ್ಲರೂ ಪರಿಸರ ರಕ್ಷಕರಾಗಬೇಕು’ ಎಂದು ಆಶಿಸಿದರು.

ADVERTISEMENT

‘ನಮ್ಮಲ್ಲಿನ ಪರಿಸರ ಪ್ರಜ್ಞೆ ಜಾಗೃತಗೊಳಿಸುವ ಕೆಲಸವನ್ನು ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದ ಧರ್ಮಾಧಿಕಾರಿ, ‘ಅವರು ಪ್ರಕೃತಿ ಬಗ್ಗೆ ತೋರುತ್ತಿರುವ ಕಾಳಜಿ ನೋಡಿದರೆ ಖುಷಿಯಾಗುತ್ತದೆ’ ಎಂದರು.

ಮುಂದಿನ ಪೀಳಿಗೆಯವರು ಕೊಟ್ಟಿದ್ದಾರೆ!:

‘ಪರಿಸರವನ್ನು ನಮಗಾಗಿ ಅಲ್ಲ ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸಬೇಕು. ಭೂಮಿಯನ್ನು ಸುಸ್ಥಿತಿಯಲ್ಲಿ ಬಿಟ್ಟು ಹೋಗಬೇಕು. ಈ ಭೂಮಿಯು ಮುಂದಿನ ಪೀಳಿಗೆಯವರು ನಮಗೆ ಕೊಟ್ಟಿರುವುದು ಎಂಬ ಪ್ರಜ್ಞೆ ನಮ್ಮಲ್ಲಿ ‌ಬರಬೇಕು.‌ ರಕ್ಷಣೆಯ ಕೆಲಸಕ್ಕೆ ಆದ್ಯತೆ‌ ಕೊಡಬೇಕು’ ಎಂದು ತಿಳಿಸಿದರು.

‘ವೃಕ್ಷಗಳು ನಾಶವಾಗದಂತೆ ನೋಡಿಕೊಳ್ಳಬೇಕು. ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸಬೇಕು. ವನ್ಯಜೀವಿಗಳು ನಾಡಿಗೆ ಬರುವುದು ಅಲ್ಲಲ್ಲಿ ವರದಿಯಾಗುತ್ತಿವೆ. ಅವುಗಳನ್ನು ನಾಶ ಮಾಡುವುದು ಹೇಗೆ ಎಂದು ಯೋಚಿಸುತ್ತೇವೆಯೇ ಹೊರತು ಅವುಗಳಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತಿಲ್ಲ. ಕಾಡಿನಲ್ಲೇ ಅವುಗಳಿಗೆ ಆಹಾರ ಸಿಕ್ಕರೆ ನಾಡಿಗೆ ಬರುವುದಿಲ್ಲ. ಹೀಗಾಗಿ ಕಾಡಿನಲ್ಲೂ ಸಸಿಗಳನ್ನು ನೆಡುವ ಯೋಜನೆಯನ್ನೂ ಅನುಷ್ಠಾನಕ್ಕೆ ‌ತಂದಿದ್ದೇವೆ’ ಎಂದರು.

ಸ್ವಚ್ಛ ರಾಜಧಾನಿಯಾಗಲಿ:

‘ಮೈಸೂರು ಸ್ವಚ್ಛ ಹಾಗೂ ಹಸಿರು ರಾಜಧಾನಿಯಾಗಿಯೂ ಆಗಲಿ’ ಎಂದು ಆಶಿಸಿದರು.

‘ಸ್ವಂತ ಜಮೀನಿನಲ್ಲಿ ಪ್ರತಿ ವರ್ಷ ಸಸಿಗಳನ್ನು ಬೆಳೆಸಿ ಅವುಗಳನ್ನು ಮೈಸೂರಿನ ಜನತೆಗೆ ನೀಡುವ ಕಾರ್ಯವನ್ನು ರಾಜೀವ್ ಮಾಡುತ್ತಿದ್ದಾರೆ. ಇದೊಂದು ಅತ್ಯುತ್ತಮ ಸೇವೆ’ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶ್ಲಾಘಿಸಿದರು.

‘ಅರಣ್ಯ ಇಲಾಖೆಯಿಂದಲೂ ಸಸಿಗಳ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ ಚಾಮುಂಡಿಬೆಟ್ಟದ ಸುತ್ತ 2 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅರಣ್ಯ ಇಲಾಖೆಯಿಂದ 40ಸಾವಿರ ಸಸಿಗಳನ್ನು ನೆಡಲಾಗಿದೆ. ರಾಜೀವ್ ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುವ ಜೊತೆಗೆ ಪರಿಸರ, ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡಿದ್ದಾರೆ. ಮೈಸೂರಿನ ಸುತ್ತಮುತ್ತ ಗಿಡ ನೆಡುವುದರ ಜೊತೆಗೆ ಪೋಷಣೆಯನ್ನೂ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಜಿಲ್ಲಾಡಳಿತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೂ ಕೈ ಜೋಡಿಸಿ ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿದೆ’ ಎಂದರು.

‘ಕೆಲವು ರಾಜಕೀಯ ನಿರ್ಧಾರಗಳಾದಾಗ ಆಕ್ಷೇಪಗಳೂ ಎದುರಾಗುತ್ತವೆ. ಆದರೆ, ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಿದ್ದನ್ನು ಇಡೀ ದೇಶ ಸ್ವಾಗತಿಸಿದೆ. ನಾವೇ ಆಯ್ಕೆಯಾಗಿದ್ದೇವೆ ಎಂಬಂತೆ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

ಉಳಿಸುವಾಗಲೂ ಬುದ್ಧಿವಂತಿಕೆ ತೋರಬೇಕು:

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಪ್ರಕೃತಿಯನ್ನು ‌ಗುರುವಿನ‌ ಸ್ಥಾನದಲ್ಲಿ ಆರಾಧಿಸಬೇಕು. ಗಾಳಿ‌, ನೀರು ನಮ್ಮೆಲ್ಲರಿಗೂ ಅವಶ್ಯವಾದುದು.‌ ಶುದ್ಧ ಗಾಳಿ ಬೇಕೆಂದರೆ ಗಿಡ–ಮರಗಳು ಇರಬೇಕು. ಅವಗಳನ್ನು ಕಡಿಯುವಾಗ ಬಳಸುವ ಬುದ್ಧಿವಂತಿಕೆಯನ್ನು ಉಳಿಸುವಾಗಲೂ‌ ತೋರಿಸಸಬೇಕು’ ಎಂದು ಸಲಹೆ ನೀಡಿದರು.

‘ಬಡಾವಣೆ ರೂಪಿಸುವುದು ಮೊದಲಾದ ಅಭಿವೃದ್ಧಿಗೆ ಮರಗಳನ್ನು ಕತ್ತರಿಸುವುದು ಅನಿವಾರ್ಯವಾಗಬಹುದು. ಆಗ ಹೆಚ್ಚಿನ ಸಸಿಗಳನ್ನು ನೆಟ್ಟು ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

‘ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸಾಮಾಜಿಕ ಸೇವೆ ಪರಿಗಣಿಸಿ ಸರ್ಕಾರವು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಅವರು ರಾಜಕೀಯಕ್ಕೆ ಆಧ್ಯಾತ್ಮಿಕ ಸಿಂಚನ ನೀಡಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್ ಮಾತನಾಡಿ, ‘ವೃಕ್ಷೋ ರಕ್ಷತಿ ರಕ್ಷಿತಃ ಎನ್ನುವುದು ನಮ್ಮ ಧ್ಯೇಯವಾಗಬೇಕು. ಮರ–ಗಿಡಗಳು ಇಲ್ಲದಿದ್ದರೆ‌ ನಮ್ಮ ಅಸ್ತಿತ್ವ ಇರುವುದಿಲ್ಲ. ಪರಿಸರ ನಾಶದಿಂದ ಅಸಮತೋಲನ ಕಾಣುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸಬೇಕು. ಪರಿಸರ ಸಂರಕ್ಷಣೆ ಭಾಗವಾಗಿ ಲಕ್ಷ ವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರಾಣಿ, ಮರಗಳಿಗೂ ಮತವಿರಲಿ: ರವೀಂದ್ರ ಭಟ್ಟ

‘ವನಸಿರಿ’– ವನಮಹೋತ್ಸವ ಕಾರ್ಯಕ್ರಮದಲ್ಲಿ ‘ಸಿರಿ ಸಂವರ್ಧನ’ ಪ್ರಶಸ್ತಿ ಪ್ರದಾನ

‘ಪ್ರಾಣಿಗಳು ಮತ್ತು ಮರಗಳಿಗೂ‌ ಮತ ಇರುವಂತೆ ಮಾಡುವುದಕ್ಕೆ ಅವಕಾಶವಿದೆ. ಚುನಾವಣೆಗಳ ಸಂದರ್ಭದಲ್ಲಿ ಮತದಾರರ ಪಟ್ಟಿಯಂತೆಯೇ ಆ ಕ್ಷೇತ್ರದಲ್ಲಿರುವ ಮರಗಳು, ಪ್ರಾಣಿಗಳ ಪಟ್ಟಿಯನ್ನೂ ಪ್ರಕಟಿಸಬೇಕು. ಅವುಗಳ ಸಂಖ್ಯೆ ಹೆಚ್ಚಾಗಿದೆಯೇ ಅಥವಾ ಕಡಿಮೆ ಆಗಿವೆಯೇ ಎನ್ನುವುದನ್ನು ಆಧರಿಸಿ ಜನರು ಮತದಾನ ಮಾಡುವಂತೆ ಆಗಬೇಕು’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

‘ವನಸಿರಿ’– ವನಮಹೋತ್ಸವ ಕಾರ್ಯಕ್ರಮದಲ್ಲಿ ‘ಸಿರಿ ಸಂವರ್ಧನ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಯಾವುದೇ ರಾಜಕಾರಣಿ ಎಷ್ಟೇ ಲಕ್ಷ ಮತಗಳ ಅಂತರದಿಂದ ಗೆದ್ದರೂ ಅವರಿಗೆ ವಿರೋಧಿಗಳಿರುತ್ತಾರೆ. ಆದರೆ, ಪರಿಸರ ಸಂರಕ್ಷಣೆ ಕಾರ್ಯಕ್ರಮ ಮಾಡಿದರೆ ವಿರೋಧಿಗಳು ಇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮೈಸೂರಿನಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ನೆಟ್ಟ ಸಸಿಗಳೆಲ್ಲವೂ ಬೆಳೆದರೆ ರಾಜೀವ್ ನಿತ್ಯ ಸಚಿವರಾಗಿರಲಿದ್ದಾರೆ’ ಎಂದರು.

ಶಿವಾನಂದ ಕಳವೆ, ವಿನಯ್ ರಾಮಕೃಷ್ಣ ಹಾಗೂ ವಿನೋದ್ ಬಿ.ನಾಯ್ಕ ಅವರಿಗೆ ‘ಸಿರಿ ಸಂವರ್ಧನ’ ಪ್ರಶಸ್ತಿ ಪ್ರದಾನ ಮಾಡಿದರು.

‘ಸಮಾಜಮುಖಿ’ ಪುಸ್ತಕ ಬಿಡುಗಡೆ ಮಾಡಿದ ‘ಪಬ್ಲಿಕ್ ಟಿ.ವಿ.’ ಮುಖ್ಯಸ್ಥ ಎಚ್.ಆರ್. ರಂಗನಾಥ್, ‘ರಾಜಕಾರಣಿಗಳಿಗೆ ಆಮ್ಲಜನಕ ಮತವೇ ಹೊರತು ಮರವಲ್ಲ. ಆದರೆ, ರಾಜೀವ್ ವಿಭಿನ್ನವಾಗಿ ಕಾಣಿಸುತ್ತಾರೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಪ್ರೋತ್ಸಾಹಿಸದಿದ್ದರೆ ಅದಕ್ಕಿಂತ ದೊಡ್ಡ ಪಾಪವಿಲ್ಲ’ ಎಂದು ಹೇಳಿದರು.

‘ಪ್ರಕೃತಿ, ಭೂಮಿ ಇಂದು ಗೋಳಾಡುತ್ತಿದೆ. ಕೇಳಿಸಿಕೊಳ್ಳಲು ನಾವು ತಯಾರಾಗಿಲ್ಲ; ಕಿವುಡಾಗಿದ್ದೇವೆ; ತಿರಸ್ಕರಿಸುತ್ತಿದ್ದೇವೆ. ನಮ್ಮಷ್ಟು ಸ್ವಾರ್ಥಿಗಳಾರೂ ಇಲ್ಲ. ನಮ್ಮ ಸ್ವಾರ್ಥಕ್ಕೆ ಕೊನೆಯೂ ಇಲ್ಲ. ಜಾಗತಿಕ ತಾಪಮಾನ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಪ್ರಕೃತಿಗೆ ಆಗುತ್ತಿರುವ ಗಾಯ ಕಣ್ಣಿಗೆ ಕಾಣದ ರೀತಿ ನಡೆಯುತ್ತಿದೆ. ಕೊನೆ ಹಂತಕ್ಕೆ ಬಂದಾಗ ಗೊತ್ತಾಗುತ್ತದೆ. ಸಸಿಗಳನ್ನು ನೆಟ್ಟರೆ ಪ್ರಯೋಜನವಾಗದು. ಅದನ್ನು ಸಲಹುವುದು ಕೂಡ ಮುಖ್ಯವಾಗುತ್ತದೆ. ಯಾರು ಏನಾದರೂ ಹೇಳಲಿ, ಮೈಸೂರನ್ನು ಮೈಸೂರಾಗಿಯೇ ಉಳಿಸಿಕೊಳ್ಳೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.