ADVERTISEMENT

ನಿದ್ರಾವಸ್ಥೆಯಲ್ಲಿ ದಸರಾ, ಅರಮನೆ ವೆಬ್‌ಸೈಟ್‌

ದಸರಾ ಮಹೋತ್ಸವಕ್ಕೆ ಸಿದ್ಧತೆ– ಮಾಹಿತಿಗಾಗಿ ಪ್ರವಾಸಿಗರ ಪರದಾಟ

ಕೆ.ಓಂಕಾರ ಮೂರ್ತಿ
Published 1 ಸೆಪ್ಟೆಂಬರ್ 2018, 18:07 IST
Last Updated 1 ಸೆಪ್ಟೆಂಬರ್ 2018, 18:07 IST
ಮೈಸೂರು ಅರಮನೆ
ಮೈಸೂರು ಅರಮನೆ   

ಮೈಸೂರು: ದಸರಾ ಮಹೋತ್ಸವ ಸಿದ್ಧತೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ, ದಸರಾ ಹಾಗೂ ಮೈಸೂರು ಅರಮನೆ ವೆಬ್‌ಸೈಟ್‌ಗಳು ಮಾತ್ರ ನಿದ್ರಾವಸ್ಥೆಯಲ್ಲಿವೆ.

ಅರಮನೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ www.mysorepalace.gov.in ಸ್ಥಗಿತಗೊಂಡು ತಿಂಗಳಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಪ್ರವಾಸಿಗರಿಗೆ ತೊಂದರೆಯಾಗಿದೆ. ಅಲ್ಲದೆ, ಅರಮನೆ ಪ್ರವೇಶದ ಸಮಯ, ಶುಲ್ಕ, ವಿದ್ಯುತ್‌ ದೀಪಾಲಂಕಾರ ಮತ್ತಿತರ ಮಾಹಿತಿ ಪಡೆದುಕೊಳ್ಳಲು ಕಷ್ಟವಾಗಿದೆ.

ವರ್ಷಕ್ಕೆ ಸುಮಾರು 35 ಲಕ್ಷ ಪ್ರವಾಸಿಗರು ಅರಮನೆಗೆ ಭೇಟಿ ನೀಡುತ್ತಾರೆ. ಹೊರರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುತ್ತಾರೆ. ಅವರೀಗ ಸರತಿ ಸಾಲಿನಲ್ಲೇ ನಿಂತು ಟಿಕೆಟ್‌ ಖರೀದಿಸಬೇಕಿದೆ.

ADVERTISEMENT

ವೆಬ್‌ಸೈಟ್‌ ನಿರ್ವಹಣೆಗೆಂದು ಖಾಸಗಿ ಸಂಸ್ಥೆಯೊಂದರ ಜೊತೆ ಅರಮನೆ ಮಂಡಳಿಯು ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದ ನವೀಕರಿಸದೆ ಸ್ಥಗಿತಗೊಂಡಿದೆ.

ಮಾಹಿತಿಗೆ ಮಾರ್ಗ ಇಲ್ಲ: ದಸರಾ ಬಗ್ಗೆ ಮಾಹಿತಿ ನೀಡಲು ರೂಪಿಸಿರುವ www.mysoredasara.gov.in ವೆಬ್‌ಸೈಟ್‌ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಈ ವೆಬ್‌ಸೈಟ್‌ ತೆರೆದರೆ ದಸರಾ ಲಾಂಛನ ಮಾತ್ರ ಕಾಣಿಸುತ್ತದೆ. ಹೀಗಾಗಿ, ನಾಡಹಬ್ಬದ ಮಾಹಿತಿ ಪಡೆಯಲು ಪ್ರವಾಸಿಗರಿಗೆ ಈಗ ಯಾವುದೇ ಮಾರ್ಗ ಇಲ್ಲದಂತಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿ ಒಂದೆಡೆ ಸಿಗುವ ವೆಬ್‌ಸೈಟ್‌ ಕೂಡ ಇಲ್ಲ.

‘‍ಖಾಸಗಿ ಸರ್ವರ್‌ನಿಂದ ಸರ್ಕಾರದ ಇ–ಗವರ್ನೆನ್ಸ್‌ ಸರ್ವರ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರವಾಸಿಗರ ಆಕರ್ಷಣೆಗಾಗಿ ವೆಬ್‌ಸೈಟ್‌ ಮರುವಿನ್ಯಾಸಗೊಳಿಸುತ್ತಿದ್ದು, ಸದ್ಯದಲ್ಲೇ ಮಾಹಿತಿ ಅಪ್‌ಲೋಡ್ ಮಾಡಲಾಗುವುದು’ ಎಂದು ವೆಬ್‌ಸೈಟ್‌ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಹೇಳುತ್ತಾರೆ.

ಇಂದು ನಾಡಿಗೆ ಗಜಪಡೆ

ನಾಡಹಬ್ಬಕ್ಕೆ ನಾಂದಿ ಹಾಡುವ ಗಜಪಡೆಗೆ ಭಾನುವಾರ ಚಾಲನೆ ಲಭಿಸಲಿದೆ. ಬುಧವಾರ ಮೈಸೂರು ಅರಮನೆ ಪ‍್ರವೇಶಿಸಲಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಮೊದಲ ಹಂತದಲ್ಲಿ ಆರು ಆನೆಗಳು ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ.

ಅಂಬಾರಿ ಆನೆ ಅರ್ಜುನ ಸೇರಿದಂತೆ 12 ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ. 37 ವರ್ಷದ ಧನಂಜಯ ಈ ಬಾರಿ ಹೊಸ ಅತಿಥಿ. ದುಬಾರೆ ಆನೆ ಶಿಬಿರದಿಂದ ಈ ಗಜವನ್ನು ಕರೆತರಲಾಗುತ್ತಿದೆ.

ಆನೆಗಳಿಗೆ ₹ 34 ಲಕ್ಷ ಮೊತ್ತದ ವಿಮೆ

ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳಿಗೆ ₹ 34 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ನ್ಯೂ ಇಂಡಿಯಾ ಅಶೂರೆನ್ಸ್‌ ಕಂಪನಿಯ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಬರೆದು ವಿಮೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ₹ 34 ಲಕ್ಷ ವಿಮೆಗಾಗಿ ₹ 40,120 ಪ್ರೀಮಿಯಂ ಪಾವತಿಸಲಾಗುತ್ತದೆ. 12 ಮಾವುತ ಹಾಗೂ ಕಾವಾಡಿಗಳಿಗೆ ತಲಾ ₹ 1 ಲಕ್ಷ ವಿಮೆ ಮಾಡಲಾಗುತ್ತದೆ.

ಆನೆಗಳು ದಸರಾ ಮೆರವಣಿಗೆ ಹಾಗೂ ತಾಲೀಮು ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ– ಪಾಸ್ತಿಗೆ ನಷ್ಟ ಉಂಟು ಮಾಡಿದರೆ ಎನ್ನುವ ಕಾರಣಕ್ಕೆ ₹ 25 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತದೆ. ಈ ವಿಮೆ ಅವಧಿಯು ಸೆ. 2ರಿಂದ ಅ. 31ರ ಅವಧಿಯ ನಡುವೆ ಚಾಲ್ತಿಯಲ್ಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.