ADVERTISEMENT

ಮೈಸೂರು ಅರಮನೆ ಅಂಗಳದಲ್ಲಿ ದಸರಾ ಆಚರಣೆಗೆ ಸಿದ್ಧತೆ!

ಸುಣ್ಣ–ಬಣ್ಣ ಬಳೆಯುವ ಕಾರ್ಯಕ್ಕೆ ಚಾಲನೆ; ಪುಷ್ಪಕೃಷಿ ಚುರುಕು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 15:41 IST
Last Updated 12 ಸೆಪ್ಟೆಂಬರ್ 2023, 15:41 IST
ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಸಸಿಗಳ ಆರೈಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಸಸಿಗಳ ಆರೈಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ವಿಶ್ವವಿಖ್ಯಾತ ದಸರಾ ಆಚರಣೆ ಆರಂಭಕ್ಕೆ ಇನ್ನೊಂದು ತಿಂಗಳಷ್ಟೇ ಉಳಿದಿದ್ದು, ಅರಮನೆ ಅಂಗಳದಲ್ಲಿ ಸಿದ್ಧತೆಗಳು ಸದ್ದಿಲ್ಲದೇ ಆರಂಭವಾಗಿವೆ.

ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗಜಪಡೆ ಈಗಾಗಲೇ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದೆ. ಆನೆಗಳ ಜೊತೆಗೆ ಮಾವುತರು–ಕಾವಾಡಿಗಳ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ ಟೆಂಟುಗಳನ್ನು ಹಾಕಲಾಗಿದೆ. ಒಂದೆಡೆ ಆನೆಗಳು ನಿತ್ಯ ಅರಮನೆಯ ಆಚೀಚೆ ಹೆಜ್ಜೆ ಹಾಕುತ್ತಿದ್ದರೆ, ಇನ್ನೊಂದೆಡೆ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ನಾನಾ ಬಗೆಯ ಆಕರ್ಷಣೀಯ, ನಳನಳಿಸುವ ಸಸಿಗಳ ಪಾಲನೆಯಲ್ಲಿ ಅಲ್ಲಿನ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ವಿವಿಧ ಜಾತಿ–ವರ್ಣದ ಸಾವಿರಾರು ಸಸಿಗಳಿಗೆ ನೀರೆರೆದು ಪೋಷಿಸಲಾಗುತ್ತಿದೆ. ಇದರೊಟ್ಟಿಗೆ ಹೊಸ ಅಂಗಳದಲ್ಲಿನ ಹುಲ್ಲನ್ನು ಹದವಾಗಿ ಕತ್ತರಿಸಲಾಗಿದೆ. ದಸರೆಗೆ ಮುನ್ನ ಹಾಗೂ ನವರಾತ್ರಿ ಸಂದರ್ಭದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅರಮನೆಯಲ್ಲಿನ ಗೋಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದರೊಟ್ಟಿಗೆ ಸ್ವಚ್ಛತಾ ಕಾರ್ಯ ಸಹ ಚುರುಕಾಗಿ ನಡೆದಿದೆ. ಹೊರ ಆವರಣದಲ್ಲಿನ ವಿದ್ಯುತ್‌ ಕಂಬಗಳಲ್ಲಿನ ದೀಪಗಳನ್ನು ಬದಲಿಸುವ ಮತ್ತು ಸ್ವಚ್ಛಗೊಳಿಸುವ ಕೆಲಸ ಈಗಾಗಲೇ ಮುಗಿದಿದೆ. ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್‌ ಸರಿಪಡಿಸುವ ಕೆಲಸವನ್ನು ಕಾರ್ಮಿಕರು ಮುಗಿಸಿದ್ದಾರೆ.

ADVERTISEMENT

ಅರಮನೆಯ ಪ್ರಮುಖ ಆಕರ್ಷಣೆ ಎಂದರೆ ದೀಪಾಲಂಕಾರ. ಒಟ್ಟು 1 ಲಕ್ಷ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಪ್ರತಿ ವರ್ಷ ದಸರೆಗೆ ಮುನ್ನ ಅರಮನೆಯಲ್ಲಿನ ಕೆಟ್ಟ ಬಲ್ಬ್‌ಗಳನ್ನು ತೆಗೆದು ಹೊಸ ಬಲ್ಬ್‌ಗಳನ್ನು ಅಳವಡಿಸಲಾಗುತ್ತದೆ. ಕಳೆದ ವರ್ಷ ಹೀಗೆ ಬರೋಬ್ಬರಿ 22 ಸಾವಿರ ಬಲ್ಬ್‌ಗಳನ್ನು ಬದಲಿಸಲಾಗಿತ್ತು. ಈ ವರ್ಷವೂ ಸದ್ಯದಲ್ಲೇ ಬಲ್ಬ್‌ಗಳ ಬದಲಾವಣೆ ಕಾರ್ಯ ಆರಂಭ ಆಗಲಿದೆ.

‘ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಲ್ಳಲಾಗಿದೆ. ಪ್ರಮುಖ ಕೆಲಸಗಳಿಗೆ ಇನ್ನೊಂದು ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು. ನಂತರದಲ್ಲಿ ಅಧಿಕೃತವಾಗಿ ಸಿದ್ಧತೆ ಕಾರ್ಯಗಳು ನಡೆಯಲಿವೆ’ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ಕೆಲಸಗಳಿಗೆ ಇನ್ನೊಂದು ವಾರದಲ್ಲಿ ಟೆಂಡರ್‌ 1 ಲಕ್ಷ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಅರಮನೆ

ಅರಮನೆಯಲ್ಲಿನ ಸಿದ್ಧತಾ ಕಾರ್ಯಗಳಿಗೆ ಸದ್ಯದಲ್ಲೇ ಟೆಂಡರ್‌ ಕರೆಯಲಾಗುವುದು. ನಂತರದಲ್ಲಿ ಅಧಿಕೃತವಾಗಿ ಕಾರ್ಯಕ್ರಮಗಳು ಆರಂಭ ಆಗಲಿವೆ
ಟಿ.ಎಸ್. ಸುಬ್ರಹ್ಮಣ್ಯ ಉಪನಿರ್ದೇಶಕ ಅರಮನೆ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.