ADVERTISEMENT

ಕೆಆರ್‌ಎಸ್‌ ಹಿನ್ನೀರಿನಲ್ಲಿ ದಸರಾ ಸಾಹಸೋತ್ಸವ 

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:29 IST
Last Updated 29 ಸೆಪ್ಟೆಂಬರ್ 2022, 15:29 IST
   

ಮೈಸೂರು: ‘ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಸೆ.30ರಿಂದ ಅ.6ರವರೆಗೆ ಜಿಲ್ಲೆಯ ಇಲವಾಲ ಹೋಬಳಿಯ ಉಂಡವಾಡಿ ಗ್ರಾಮದ (ನಡುಗಡ್ಡೆಯ ಬಳಿ) ಕೆಆರ್‌ಎಸ್‌ ಹಿನ್ನೀರಿನಲ್ಲಿ ಜಲ ಸಾಹಸ ಕ್ರೀಡೆಯನ್ನು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ದಸರಾ ಸಾಹಸೋತ್ಸವ ಸಮಿತಿ ಉಪ ವಿಶೇಷಾಧಿಕಾರಿ ಆರ್.ಚೇತನ್ ತಿಳಿಸಿದರು.

‘ಸೆ.30ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ‍ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ನಿತ್ಯ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜಲ ಸಾಹಸ ಕ್ರೀಡೆ ನಡೆಯಲಿದೆ. ರ‍್ಯಾಫ್ಟಿಂಗ್‌ ₹ 50, ಜೆಟ್ ಸ್ಕಿ ₹ 250, ಸ್ಪೀಡ್ ಬೋಟ್ ₹ 150, ಬನಾನ ರೈಡ್ ₹ 200, ಬಂಪರ್ ರೈಡ್ ₹ 250, ಕಯಾಕಿಂಗ್ ₹ 100 ಹಾಗೂ ಚಾಲೆಂಜ್‌ ರೋಪ್ ಚಟುವಟಿಕೆಗಳಿಗೆ (ಜುಮರಿಂಗ್, ರ‍್ಯಾಪಲಿಂಗ್ ಹಾಗೂ ಜಿಪ್‌ಲೈನ್‌) ₹ 50 ಶುಲ್ಕ ನಿಗದಿಪಡಿಸಲಾಗಿದೆ. ಇದರೊಂದಿಗೆ ಹಾಯಿದೋಣಿ ಚಟುವಟಿಕೆಯೂ ಇರಲಿದೆ. ಹೆಚ್ಚಿನ ಮಾಹಿತಿಗೆ ಶಬ್ಬೀರ್ ಎಫ್. (8971553337) ಸಂಪರ್ಕಿಸಬಹುದು’ ಎಂದು ವಿವರಿಸಿದರು.

ADVERTISEMENT

‘ಅ.2ರಂದು ಬೆಳಿಗ್ಗೆ 7.30ಕ್ಕೆ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಹತ್ತುವ ಸ್ಪರ್ಧೆಯನ್ನು 4 ವಿಭಾಗಗಳಲ್ಲಿ ಆಯೋಜಿಸಲಾಗಿದೆ‌. ಅಂದು ಬೆಳಗ್ಗೆ 6ರಿಂದ 7ರವರೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. 16 ವರ್ಷದೊಳಗಿನ ಬಾಲಕರು, 16 ವರ್ಷದೊಳಗಿನ ಬಾಲಕಿಯರು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು. ಉಚಿತವಾಗಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮುನಿರಾಜು (7899941661) ಸಂಪರ್ಕಿಸಬಹುದು’ ಎಂದು ತಿಳಿಸಿದರು.

ದಸರಾ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಸುಬ್ಬಣ್ಣ ಕುಬ್ರಳ್ಳಿ, ಉಪಾಧ್ಯಕ್ಷರಾದ ಶಿವರಾಜ್, ನಾಗಣ್ಣಗೌಡ, ಸದಸ್ಯರಾದ ವಿನಯ್ ಕುಮಾರ್, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.