ADVERTISEMENT

ಮೈಸೂರು ವಿಭಾಗಕ್ಕೆ ಸಮಗ್ರ ಪ್ರಶಸ್ತಿ

ದಸರಾ ಕ್ರೀಡಾಕೂಟಕ್ಕೆ ತೆರೆ; 203 ಪಾಯಿಂಟ್‌ ಕಲೆಹಾಕಿದ ಮೈಸೂರು ವಿಭಾಗ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:16 IST
Last Updated 4 ಅಕ್ಟೋಬರ್ 2019, 20:16 IST
ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಮೈಸೂರು ವಿಭಾಗ ತಂಡಕ್ಕೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಟ್ರೋಫಿ ವಿತರಿಸಿದರು. ಸಚಿವ ವಿ.ಸೋಮಣ್ಣ, ಪುಷ್ಪಲತಾ ಜಗನ್ನಾಥ್, ಕಲ್ಪನಾ, ಪರಿಮಳಾ ಶ್ಯಾಂ, ಜಗದೀಶ್‌ ಇದ್ದಾರೆ
ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಮೈಸೂರು ವಿಭಾಗ ತಂಡಕ್ಕೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಟ್ರೋಫಿ ವಿತರಿಸಿದರು. ಸಚಿವ ವಿ.ಸೋಮಣ್ಣ, ಪುಷ್ಪಲತಾ ಜಗನ್ನಾಥ್, ಕಲ್ಪನಾ, ಪರಿಮಳಾ ಶ್ಯಾಂ, ಜಗದೀಶ್‌ ಇದ್ದಾರೆ   

ಮೈಸೂರು: ರಾಜ್ಯದ ವಿವಿಧ ಭಾಗಗಳ ಕ್ರೀಡಾಪಟುಗಳಿಗೆ ಪ್ರತಿಭೆ ತೋರಿಸಲು ಅವಕಾಶ ಕಲ್ಪಿಸಿಕೊಟ್ಟ ದಸರಾ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆಬಿತ್ತು.

ಬಹುತೇಕ ಕ್ರೀಡೆಗಳಲ್ಲಿ ಪಾರಮ್ಯ ಮೆರೆದ ಮೈಸೂರು ವಿಭಾಗದವರು ಸಮಗ್ರ ಚಾಂಪಿಯನ್‌ಷಿಪ್ ಗೆದ್ದುಕೊಂಡು ‘ದಸರಾ ಸಿ.ಎಂ ಕಪ್‌’ ತಮ್ಮದಾಗಿಸಿಕೊಂಡರು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ವಿಜೇತರಿಗೆ ಟ್ರೋಫಿ ವಿತರಿಸಿದರು.

ಬಳಿಕ ಮಾತನಾಡಿ, ಸದೃಢ ಭಾರತ ನಿರ್ಮಾಣದ ಗುರಿಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್‌ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದಾರೆ. ಕ್ರೀಡೆಯಿಂದ ದೇಹ ಮತ್ತು ಮನಸ್ಸು ಫಿಟ್‌ ಆಗುತ್ತದೆ ಎಂದು ಹೇಳಿದರು.

ADVERTISEMENT

‘ಈ ವೇದಿಕೆಯಲ್ಲಿ ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ನೀವು ಕೂಡಾ ಉತ್ತಮ ಸಾಧನೆ ಮಾಡಿ ಸನ್ಮಾನ ಸ್ವೀಕರಿಸುವಂತಾಗಲಿ’ ಎಂದು ಶುಭ ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಮುಂದಿನ ದಿನಗಳಲ್ಲಿ ದಸರಾ ಕ್ರೀಡಾಕೂಟಕ್ಕೆ ಹೊಸ ರೂಪ ನೀಡಲಾಗುವುದು ಎಂದು ಹೇಳಿದರು.

ಮೈಸೂರು ವಿಭಾಗ ಒಟ್ಟು 203 ಪಾಯಿಂಟ್‌ಗಳನ್ನು ಕಲೆಹಾಕಿ ಅಗ್ರಸ್ಥಾನ ಪಡೆಯಿತು. ಕೊಕ್ಕೊ, ಕಬಡ್ಡಿಯಲ್ಲಿ ಮೈಸೂರು ವಿಭಾಗ ಪ್ರಶಸ್ತಿ ಗೆದ್ದುಕೊಂಡಿತು. ಕೊಕ್ಕೊ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳೆಯರ ತಂಡಗಳು ತಲಾ 12 ಪಾಯಿಂಟ್‌ಗಳೊಂದಿಗೆ ಚಾಂಪಿಯನ್‌ ಆದವು.

ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸಿಇಒ ಕೆ.ಜ್ಯೋತಿ, ದಸರಾ ಕ್ರೀಡಾ ಉಪಸಮಿತಿ ಅಧ್ಯಕ್ಷ ಜಗದೀಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.