
ಹುಣಸೂರು: ತಾಲ್ಲೂಕಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್‌ನಿಂದ ತಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿ, ರೈತರ ಆರ್ಥಿಕ ಸಂಕಷ್ಟ ನಿವಾರಿಸಿ, ಅನ್ನತಾದರ ರಕ್ಷಣೆ ನಡೆದಿತ್ತು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ತಾಲ್ಲೂಕಿನ ಬನ್ನಿಕುಪ್ಪೆಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನವೀಕರಣಗೊಂಡ ಬಳಿಕ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾಗಿ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸೇರಿ ಸಹಕಾರಿ ಕ್ಷೇತ್ರ ಅಭಿವೃದ್ಧಿಗೊಳಿಸುವ ಕೆಲಸ ನಡೆದಿದೆ. ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿದ್ದ ಅವಧಿಯಲ್ಲಿ 65 ವರ್ಷಗಳಲ್ಲಿ ಮಾಡಲಾಗದ ದಾಖಲೆ ಪ್ರಮಾಣದ ಆರ್ಥಿಕ ವಹಿವಾಟು ಮತ್ತು ಠೇವಣಿ ಸಂಗ್ರಹ ತಮ್ಮ ಅವಧಿಯಲ್ಲಿ ಮಾಡಲಾಗಿದೆ. ಪ್ರಸ್ತುತ ಡಿಸಿಸಿ ಬ್ಯಾಂಕ್‌ಗೆ ಚುನಾವಣೆ ಪೂರ್ಣ ಪ್ರಮಾಣದಲ್ಲಿ ಇಂದಿನ ಸರ್ಕಾರ ಮಾಡಲಾಗದೆ ಒಂದು ವರ್ಷದಿಂದ ಆಡಳಿತಾಧಿಕಾರಿಗಳ ಹಿಡಿತದಲ್ಲಿದೆ ಎಂದರು.
ತಮ್ಮ ಅವಧಿಯಲ್ಲಿ ಬನ್ನಿಕುಪ್ಪೆ ಸಹಕಾರಿ ಬ್ಯಾಂಕ್‌ನ 380 ಷೇರುದಾರರಿಗೆ ಡಿಸಿಸಿ ಬ್ಯಾಂಕ್‌ನಿಂದ ₹ 18 ಲಕ್ಷ ಆರ್ಥಿಕ ಸಹಾಯ ನೀಡಿದ್ದೇನೆ. ತಮ್ಮ ಅವಧಿಯ ಬಳಿಕ ಈವರೆಗೆ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅನುದಾನವಿಲ್ಲದೆ ಕೃಷಿಕರಿಗೆ ಬೇಸಾಯ ಸಾಲ, ಗೊಬ್ಬರ ಸಾಲ ಇಲ್ಲವಾಗಿದೆ ಎಂದರು.
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ್ ಶಾಸಕರನ್ನು ಗೌರವಿಸಿದರು. ಉಪಾಧ್ಯಕ್ಷ ಚೌಡನಾಯಕ, ಸದಸ್ಯರಾದ ಗೋವಿಂದೇಗೌಡ, ಚೆಲುವರಾಜ್, ಜ್ಯೋತಿ ಕುಮಾರ್, ಪುಟ್ಟನಾಯಕ, ಅಣ್ಣನಾಯಕ, ಅಶೋಕ, ಈಶ್ವರಗೌಡ ಸೇರಿ ಬನ್ನಿಕುಪ್ಪೆ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.