ಮೈಸೂರು: ‘ಹುಣಸೂರು ತಾಲ್ಲೂಕಿನ ತಾವಡಗೆರೆ ಹೋಬಳಿಯ ಹರವೆ ಗ್ರಾಮದ ಎಚ್.ಸಿ.ಹರೀಶ್ ಎಂಬುವವರು ಮಾರ್ಚ್ 20ರಂದು ಮೃತಪಟ್ಟಿದ್ದು, ಈ ಬಗ್ಗೆ ದೂರು ನೀಡಿದ್ದರೂ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆ’ ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಡಿವಾಳ ಸಘದ ಉಪಾಧ್ಯಕ್ಷರಾಗಿದ್ದ ಎಚ್.ಸಿ.ಹರೀಶ್ ಜೀವನೋಪಾಯಕ್ಕಾಗಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಅವರು ಆರೋಪಿಗಳ ಬಳಿ ಸಾಲ ಮಾಡಿದ್ದು, ಇದೇ ವಿಷಯಕ್ಕೆ ನಡೆದ ಜಗಳದಲ್ಲಿ ಹುಣಸೂರು ನಿವಾಸಿಗಳಾದ ರವಿ ಸಾಲಿಯಾನ, ಸಹಚರರಾದ ಚಿನ್ನು, ನವೀನ್ ಮತ್ತು ಗೌತಮ್ ಕೊಲೆ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಸಾಲಿಗ್ರಾಮ ತಾಲ್ಲೂಕಿನ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣರಾಜು ಹಾಗೂ ಇನ್ನಿತರ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
‘ತನಿಖೆ ನಡೆಸಲು ಪೊಲೀಸ್ ಇಲಾಖೆ ಅಸಮರ್ಥವಾಗಿದ್ದು, ಸಿಐಡಿ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ವೇದಿಕೆ ಹೋರಾಟ ನಡೆಸುತ್ತದೆ’ ಎಂದು ಎಚ್ಚರಿಸಿದರು.
ಹರೀಶ್ ಪತ್ನಿ ಸುನೀತಾ, ಮುಖಂಡರಾದ ಸೀಗೂರು ವಿಜಯಕುಮಾರ್, ಟಿ.ಈರಯ್ಯ, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಕೊಪ್ಪ ಎಂ.ಮಾದೇಶ್‌ಕುಮಾರ್, ಹೊರಳವಾಡಿ ನಂಜುಂಡಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.