ADVERTISEMENT

ರಫಾಯೆಲ್‌ ಮ್ಯಾಥ್ಯೂ ಕೊಲಾಸೊ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 10:16 IST
Last Updated 29 ನವೆಂಬರ್ 2019, 10:16 IST
ರ‍್ಯಾಪೇಲ್‌ ಮ್ಯಾಥ್ಯೂ ಕೊಲಾಸೊ
ರ‍್ಯಾಪೇಲ್‌ ಮ್ಯಾಥ್ಯೂ ಕೊಲಾಸೊ   

ಮೈಸೂರು: ರೆವರೆಂಡ್ ಫಾದರ್ ರಫಾಯೆಲ್‌ ಮ್ಯಾಥ್ಯೂ ಕೊಲಾಸೊ (75) ಗುರುವಾರ ಹೃದಯಾಘಾತದಿಂದ ನಿಧನರಾದರು. ಇವರು ಮೈಸೂರು ಧರ್ಮಕ್ಷೇತ್ರದ ಧರ್ಮಗುರುವಾಗಿ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ನ. 29ರಂದು ಬೆಳಿಗ್ಗೆ 8 ಗಂಟೆಯ ನಂತರ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಅಂತ್ಯ ಸಂಸ್ಕಾರದ ಪೂಜಾರಾಧನೆ ನಡೆಯಲಿದೆ. ಗಾಂಧಿನಗರದ ಕ್ರೈಸ್ತರ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನಗಳು ಜರುಗಲಿವೆ. ಇವರಿಗೆ ಇಬ್ಬರು ಸೋದರರು ಹಾಗೂ ಸೋದರಿಯರು ಇದ್ದಾರೆ.

1944ರ ಡಿಸೆಂಬರ್ 13ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಇವರು, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಇಲ್ಲಿನ ಸಂತ ಫಿಲೊಮಿನಾ ಪ್ರೌಢಶಾಲೆಯಲ್ಲಿ, ಗುರು ತರಬೇತಿಯನ್ನು ಸಂತ ಮರಿಯಮ್ಮನವರ ಕಿರಿಯ ಗುರುಮಂದಿರದಲ್ಲಿ ಪಡೆದರು. 1972ರಲ್ಲಿ ಮೈಸೂರು ಧರ್ಮಕ್ಷೇತ್ರದ ಗುರುವಾಗಿ ನೇಮಕಗೊಂಡರು.

ADVERTISEMENT

ಸಂತ ಜೋಸೆಫರ ಪ್ರಧಾನಾಲಯದಲ್ಲಿ ಸಹಾಯಕ ಗುರುವಾಗಿ ಸೇವೆಯನ್ನಾರಂಭಿಸಿದ ಇವರು ನಂತರ ನಾಗವಳ್ಳಿ, ಮಡಿಕೇರಿ ಮತ್ತು ಮಾರ್ಟಳ್ಳಿ ಧರ್ಮಕೇಂದ್ರದ ಧರ್ಮಗುರುಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯಾಗಿ ನೇಮಕಗೊಂಡರು. ಜತೆಗೆ, ಜಯಲಕ್ಷಿಪುರಂನ ಸಂತ ಜೋಸೆಫರ ದೇವಾಲಯದ ಧರ್ಮಗುರುವಾಗಿಯೂ ಕಾರ್ಯನಿರ್ವಹಿಸಿದರು.

ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ಸಾವಿರಾರು ಬಡ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕಡಿಮೆ ವೆಚ್ಚದಲ್ಲಿ ನೀಡಿದ್ದು ಹಾಗೂ ಗ್ರಾಮೀಣ ವಿದ್ಯಾ ಸಂಸ್ಥೆಗಳಿಗೆ ಹಣಕಾಸಿನ ನೆರವು ಒದಗಿಸಿದ್ದು ಇವರ ಹೆಗ್ಗಳಿಕೆ.

ಜಯಲಕ್ಷ್ಮೀಪುರಂನ ಸಂತ ಜೋಸೆಫರ ಪದವಿಪೂರ್ವ ಕಾಲೇಜು ಹಾಗೂ ಇಲವಾಲದ ಸಂತ ಜೋಸೆಫರ ಕೇಂದ್ರಿಯ ವಿದ್ಯಾಲಯವನ್ನು ಸ್ಥಾಪಿಸಿದ ಹಿರಿಮೆ ಇವರದು.

ಕೊಡಗಿನ ಗಡಿಯಲ್ಲಿರುವ ನಿರ್ಮಲ ಮಾತೆಯ ದೇವಾಲಯ, ಕುಟ್ಟ ಹಾಗೂ ಮೈಸೂರಿನ ಹಿನಕಲ್ ಪವಿತ್ರ ಕುಟುಂಬ ದೇವಾಲಯದ ಧರ್ಮಗುರುವಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಮುಂದೆ ಸ್ವಯಂನಿವೃತ್ತಿ ಪಡೆದು ಧರ್ಮಕ್ಷೇತ್ರದ ನಿವೃತ್ತ ಗುರುಗಳ ನಿವಾಸ ‘ಪ್ರಶಾಂತ ನಿಲಯದಲ್ಲಿ’ ವಾಸವಿದ್ದರು.

ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ.ಕೆ.ಎ.ವಿಲಿಯಂ, ನಿವೃತ್ತ ಧರ್ಮಾಧ್ಯಕ್ಷರಾದ ಡಾ.ಥಾಮಸ್‍ ಆಂಟನಿ ವಾಜಪಿಳ್ಳೈ ಸೇರಿದಂತೆ ಧರ್ಮಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.