ADVERTISEMENT

ಪಂಚಮಸಾಲಿಗಳನ್ನು 2ಎಗೆ ಸೇರಿಸದಿರಿ: ಕೆ.ಸಿ.ಪುಟ್ಟಸಿದ್ದಶೆಟ್ಟಿ

ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 10:01 IST
Last Updated 4 ಏಪ್ರಿಲ್ 2022, 10:01 IST
ಕೆ.ಸಿ.ಪುಟ್ಟಸಿದ್ದಶೆಟ್ಟಿ
ಕೆ.ಸಿ.ಪುಟ್ಟಸಿದ್ದಶೆಟ್ಟಿ   

ಮೈಸೂರು: ‘ಪಂಚಮಸಾಲಿಗಳನ್ನು ಯಾವುದೇ ಕಾರಣಕ್ಕೂ 2ಎಗೆ ಸೇರಿಸಬಾರದು. ಬುಡಕಟ್ಟು ಜನಾಂಗಕ್ಕೆ 2006ರ ಅರಣ್ಯ ಕಾಯ್ದೆ ಪ್ರಕಾರ ಪುನರ್‌ವಸತಿ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಒತ್ತಾಯಿಸಿದರು.

ಕಾಯಕ ಸಮಾಜಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದುಂಡುಮೇಜಿನ ಪರಿಷತ್‌ನಲ್ಲಿ ಮಾತನಾಡಿದ ಅವರು, ‘ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲ ಸಂಗಮ ಮಠಾಧೀಶರಾದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿಗಳನ್ನು 2ಎಗೆ ಸೇರಿಸಲು ನಡೆಸುತ್ತಿರುವ ಹೋರಾಟ ಸಂವಿಧಾನ ಬಾಹಿರವಾಗಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಅವರ ಒತ್ತಾಯಕ್ಕೆ ಸರ್ಕಾರ ಮಣಿಯಬಾರದು’ ಎಂದರು.

‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ಸಂಬಂಧ ವಾದ ಮಂಡಿಸಲು ಅವಕಾಶ ನೀಡಿತ್ತು. ಪಂಚಮಸಾಲಿಗಳನ್ನು ಯಾವ ಕಾರಣಕ್ಕೆ 2ಎಗೆ ಸೇರಿಸಬಾರದು ಎಂಬ ಬಗ್ಗೆ ದಾಖಲೆಗಳನ್ನು ಮಂಡಿಸಲಾಗಿದೆ. ಈಗ 2ಎಯಲ್ಲಿ ಇರುವ 102 ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ರಾಜಕೀಯ ಮೀಸಲಾತಿಯಲ್ಲಿನ ಬಿಕ್ಕಟ್ಟು ಬಗೆಹರಿದ ಬಳಿಕವೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಆದಿವಾಸಿಗಳ ಬದುಕು ಕಸಿಯುತ್ತಿರುವ ಅರಣ್ಯ ಅಧಿಕಾರಿಗಳು: ‘ಆದಿವಾಸಿಗಳಿಗೆ ಭೂಮಿ, ಪುನರ್ವಸತಿ, ಒಳಮೀಸಲಾತಿ, ರಾಜಕೀಯ ಅಧಿಕಾರ ಕಲ್ಪಿಸಲು ಸರ್ಕಾರಗಳು ವಿಫಲವಾಗಿವೆ. ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ ಜಾರಿಗೊಳಿಸಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅರಣ್ಯಾಧಿಕಾರಿಗಳ ಆಧಿಪತ್ಯದಿಂದ ಆದಿವಾಸಿಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಅವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘147 ಅರಣ್ಯ ಅವಲಂಬಿತ ಆದಿವಾಸಿ ಹಾಡಿಗಳಿಗೆ ವೈಯಕ್ತಿಕ ಹಾಗೂ ಸಾಮೂಹಿಕ ಹಕ್ಕು ನೀಡಬೇಕು. ರಾಜ್ಯದ 70 ಸಾವಿರ ಆದಿವಾಸಿ ಕುಟುಂಬಗಳು ತಮ್ಮ ಪಾರಂಪರಿಕ ಅರಣ್ಯ ನೆಲಸುಗಳ ಮೇಲಿನ ಹಕ್ಕನ್ನು ಹೊಂದುವಂತೆ ಕ್ರಮ ವಹಿಸಬೇಕು. ನಾಗರಹೊಳೆ ಉದ್ಯಾನದಿಂದ ಹೊರಹಾಕಿರುವ 3418 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ನೀಡಲು ವಿಳಂಬ ಮಾಡುತ್ತಿರುವ ಅನುಷ್ಠಾನ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪಶ್ಚಿಮಘಟ್ಟದ 9 ಜಿಲ್ಲೆಗಳ 22 ತಾಲ್ಲೂಕುಗಳ ಸುಮಾರು 1500 ಆದಿವಾಸಿ ನೆಲಸುಗಳು ಸೇರಿದಂತೆ ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 440 ಹಾಡಿ, ಪೋಡುಗಳನ್ನು, ಜಮ್ಮಾ ಕಾಡನ್ನು 5ನೇ ಅನುಸೂಚಿತ ಪ್ರದೇಶ ಎಂದು ಘೋಷಿಸಬೇಕು. ಆದಿವಾಸಿ ಪಂಚಾಯಿತಿ ಕಾಯ್ದೆ 1996ಅನ್ನು ಕರ್ನಾಟಕದಲ್ಲೂ ಜಾರಿಗೊಳಿಸಿ ಆದಿವಾಸಿ ಪಂಚಾಯಿತಿಗಳನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಮೈಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ಕೆ.ಆರ್‌.ನಗರ, ಹುಣಸೂರು, ಕೊಡಗು ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಒಕ್ಕೂಟದ ಪದಾಧಿಕಾರಿಗಳಾದ ಬೋರಪ್ಪ ಶೆಟ್ಟಿ, ಮಹದೇವ್‌ ಗಾಣಿಗ, ಶ್ರೀನಿವಾಸ್‌, ಹಿರಣ್ಣಯ್ಯ, ಶಿವರಾಜ್‌, ನಾಗರಾಜಪ್ಪ, ನಂಜುಂಡಸ್ವಾಮಿ, ಪುಟ್ಟಶೆಟ್ಟಿ, ಮಲ್ಲೇಶ್‌, ಬೋಗಾಚಾರ್‌, ರಾಮಕೃಷ್ಣ ಶೆಟ್ಟಿ, ರಮೇಶ್‌, ಶ್ರೀನಿವಾಸಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.