ADVERTISEMENT

ರಸ್ತೆ, ಸೇತುವೆ ದುರಸ್ತಿಗೆ ₹ 50 ಕೋಟಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 14:46 IST
Last Updated 1 ಆಗಸ್ಟ್ 2022, 14:46 IST

ಮೈಸೂರು: ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾಳಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿ ಕಾಮಗಾರಿ ಕೈಗೊಳ್ಳುವುದಕ್ಕಾಗಿ ಕಾಡಾಕ್ಕೆ ₹ 50 ಕೋಟಿ ಅನುದಾನ ಒದಗಿಸುವಂತೆ ಕೋರಲಾಗುವುದು’ ಎಂದು ಅಧ್ಯಕ್ಷ ಜಿ.ನಿಜಗುಣರಾಜು ತಿಳಿಸಿದರು.

‘ಇನ್ನೆರಡು ದಿನಗಳಲ್ಲಿ ಅಂದಾಜುಪಟ್ಟಿ ತಯಾರಿಸಿ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‌‘‌ಕಳೆದೆರಡು ವರ್ಷಗಳಿಂದ ಕೋವಿಡ್–19 ಕಾರಣದಿಂದಾಗಿ ಕಾಡಾಕ್ಕೆ ಕಡಿಮೆ ಅನುದಾನ ಬಂದಿದೆ. ಅದರಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.

ADVERTISEMENT

‘7 ಜಿಲ್ಲೆಗಳು ಮತ್ತು19 ಜಲಾಶಯಗಳು ಕಾಡಾ ವ್ಯಾಪ್ತಿಗೆ ಬರುತ್ತವೆ. ಅಧಿಕಾರ ವಹಿಸಿಕೊಂಡ ಬಳಿಕ ಮೂರು ಜಲಾಶಯಗಳಿಗೆ ಭೇಟಿ ನೀಡಿದ್ದೇನೆ. ವಿಧಾನಸಭೆ ಚುನಾವಣೆ ವರ್ಷವಾದ್ದರಿಂದ ಜನರ ನಿರೀಕ್ಷೆ ಹೆಚ್ಚಿರುತ್ತದೆ. ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಮತ್ತು ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಬದ್ಧನಾಗಿ ಕಾರ್ಯನಿರ್ವಹಿಸಲಿದ್ದೇನೆ. ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ಪ್ರಸ್ತುತ ಕಾಡಾಕ್ಕೆ ₹ 10 ಕೋಟಿ ಅನುದಾನ ಬಂದಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ತ್ವರಿತಗತಿಯಲ್ಲಿ ಕೆಲಸ ಮಾಡಬೇಕಿದೆ. ರೈತರು ಸಂಚರಿಸುವ ರಸ್ತೆಗಳು, ಎತ್ತಿನಗಾಡಿಗಳು ಓಡಾಡುವ ರಸ್ತೆಗಳು ಕಾಡಾ ವ್ಯಾಪ್ತಿಗೆ ಬರುತ್ತವೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಕಾಲುವೆಗಳು ಒಳಪಡುತ್ತವೆ. ನೀರು ಬಳಕೆದಾರರ ಸಂಘದೊಡನೆ ಸಮನ್ವಯ ಸಾಧಿಸಿ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.