ADVERTISEMENT

ಹೈಬ್ರಿಡ್ ಅವರೆಕಾಯಿಗೆ ಬಹುಬೇಡಿಕೆ

ಜಯಪುರ ಭಾಗದಿಂದ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ಅವರೆಕಾಯಿ ರವಾನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:11 IST
Last Updated 7 ಜುಲೈ 2021, 10:11 IST
ಜಯಪುರ ಹೋಬಳಿಯ ಡಿ.ಸಾಲುಂಡಿ ಗ್ರಾಮದ ರೈತ ಬಸವೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಅವರೆಕಾಯಿ
ಜಯಪುರ ಹೋಬಳಿಯ ಡಿ.ಸಾಲುಂಡಿ ಗ್ರಾಮದ ರೈತ ಬಸವೇಗೌಡ ಅವರ ಜಮೀನಿನಲ್ಲಿ ಬೆಳೆದಿರುವ ಅವರೆಕಾಯಿ   

ಜಯಪುರ: ಹೋಬಳಿಯ ರೈತರು ಮಳೆಯನ್ನೇ ನೆಚ್ಚಿಕೊಂಡಿದ್ದು ಅವರೆಕಾಯಿ, ಅಲಸಂದೆ, ಉದ್ದು, ಜೋಳ ಸೇರಿದಂತೆ ದ್ವಿದಳ ಧಾನ್ಯ ಬೆಳೆಯುತ್ತಿದ್ದಾರೆ. ಈಗ ಈ ಭಾಗದಲ್ಲಿ ಹೈಬ್ರಿಡ್‌ ಅವರೆಕಾಯಿ ಪ್ರಸಿದ್ಧಿ ಪಡೆದಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಹೊರರಾಜ್ಯಗಳಲ್ಲಿ ಮೈಸೂರು ಭಾಗದ ಅವರೆಕಾಯಿಗೆ ಬಹುಬೇಡಿಕೆ ಇದೆ. ರೈತರಿಗೂ ಹೆಚ್ಚಿನ ಆದಾಯ ತಂದುಕೊಡುವ ಬೆಳೆಯಾಗಿದೆ.

ಹೋಬಳಿಯಾದ್ಯಂತ 5 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಅವರೆಕಾಯಿ ಬಿತ್ತನೆ ಕಾರ್ಯ ನಡೆದಿದೆ. ಈ ಭಾಗದ ರೈತರು ಎಚ್3, ಎಚ್4 ತಳಿಯ ಅವರೆ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಅರ್ಕಾಜಾಯ್ ಮತ್ತು ಮತ್ತಿ ಅವರೆಯನ್ನು ಬೆಳೆಯುತ್ತಿದ್ದಾರೆ. 90ರಿಂದ 100 ದಿನಗಳಲ್ಲಿ ಕಾಯಿ ಕೊಯ್ಲಿಗೆ ಬರುತ್ತದೆ ಎಂದು ನಾಗನಹಳ್ಳಿ ಕೃಷಿ ವಿಸ್ತರಣಾ ಘಟಕದ ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಡಾ.ಸಿ ರಾಮಚಂದ್ರ ತಿಳಿಸಿದರು.

ADVERTISEMENT

ದಲ್ಲಾಳಿಗಳು ರೈತರ ಜಮೀನಿಂದಲೇ ನೇರವಾಗಿ ಪ್ರತಿ ಕೆ.ಜಿ.ಗೆ ₹25ರಿಂದ ₹30 ದರಕ್ಕೆ ಖರೀದಿಸುತ್ತಿದ್ದಾರೆ. ಇದರಿಂದ ಆಟೊ ಬಾಡಿಗೆ, ಕಮಿಷನ್ ಕೊಡುವುದು ತಪ್ಪುತ್ತಿದೆ.

ಬೆಂಗಳೂರು ಮಾರುಕಟ್ಟೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಿಗೆ ನಿತ್ಯ ಸುಮಾರು 100 ಟನ್ ಅವರೆಕಾಯಿಯನ್ನು ರೈತರಿಂದ ನೇರವಾಗಿ ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿ, ದೊಡ್ಡಹುಂಡಿ ಗ್ರಾಮದ ಪೈಸಾ ರಮೇಶ್ ತಿಳಿಸಿದರು.

ಡಿ.ಸಾಲುಂಡಿ ಗ್ರಾಮದ ಸಾವಯವ ಕೃಷಿಕ ಬಸವೇಗೌಡ ಅವರು, ಮೂರೂ ವರೆ ಎಕರೆ ಪ್ರದೇಶದಲ್ಲಿ ಅವರೆಕಾಯಿ ಬೆಳೆದಿದ್ದಾರೆ. ಪ್ರತಿ ಎಕರೆಗೆ 5 ಟನ್‌ನಿಂದ 6 ಟನ್‌ ಇಳುವರಿ ಪಡೆಯುತ್ತಿದ್ದಾರೆ.

ವಾಡಿಕೆಯಂತೆ ಮಳೆ ಬಿದ್ದಿದ್ದರೆ ಅವರೆಕಾಯಿ ಉತ್ತಮ ಇಳುವರಿ ಬರುತ್ತಿತ್ತು. ಅಲ್ಪ ಪ್ರಮಾಣದಲ್ಲಿ ಮಳೆ ಯಾದ್ದರಿಂದ ಇಳುವರಿ ಕಡಿಮೆಯಾಗಿದೆ ಎಂದು ರೈತ ಬೀರೇಗೌಡ ತಿಳಿಸಿದರು.

ಅವರೆಕಾಯಿ ಕಾಳುಗಳಲ್ಲಿ ‘ಡೋಪೋಮೈನ್’ ಎಂಬ ‘ಅಮೈನೋ’ ಆಮ್ಲವಿದ್ದು, ಮನುಷ್ಯನನ್ನು ಲವಲವಿಕೆ ಯಿಂದ ಇರುವಂತೆ ಮಾಡುತ್ತದೆ ಎಂದು ಜಯಪುರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.