ADVERTISEMENT

ಶಾಲೆ ಹಸ್ತಾಂತರಿಸಲು ಆಶ್ರಮ ಆಗ್ರಹ

ಎನ್‌ಟಿಎಂ ಶಾಲಾ ಮಕ್ಕಳ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:38 IST
Last Updated 21 ಸೆಪ್ಟೆಂಬರ್ 2021, 16:38 IST
ಸ್ವಾಮಿ ಮುಕ್ತಿದಾನಂದ
ಸ್ವಾಮಿ ಮುಕ್ತಿದಾನಂದ   

ಮೈಸೂರು: ಇಲ್ಲಿನ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಕುರಿತು ದಾಖಲಾಗಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದ್ದು, ಸರ್ಕಾರ ಕೂಡಲೇ 2013 ಜನವರಿ 9ರ ಆದೇಶವನ್ನು ಪಾಲನೆ ಮಾಡಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಒತ್ತಾಯಿಸಿದ್ದಾರೆ.

ಶಾಲೆಯ ಸ್ಥಳಾಂತರ ಹಾಗೂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧ ಎನ್‌ಟಿಎಂ ಶಾಲಾ ಮಕ್ಕಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಈಗ ಸರ್ಕಾರಕ್ಕೆ ತಾನೇ ಹೊರಡಿಸಿದ ಶಾಲೆ ಇರುವ ಪ್ರದೇಶದ ಹಸ್ತಾಂತರದ ಆದೇಶ ಪಾಲನೆಗೆ ಯಾವುದೇ ತೊಡಕು ಇಲ್ಲ. ಕೂಡಲೇ ಶಾಲೆ ಇರುವ ಪ್ರದೇಶವನ್ನು ಆಶ್ರಮಕ್ಕೆ ಹಸ್ತಾಂತರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಎನ್‌ಟಿಎಂ ಶಾಲೆಯ ಒಟ್ಟು 22 ಮಂದಿ ಮಕ್ಕಳು ಶಾಲೆಯನ್ನು ಪಕ್ಕದ ದೇವರಾಜ ಶಾಲೆಗೆ ಸ್ಥಳಾಂತರ ಮಾಡುವುದರಿಂದ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹಾಗಾಗಿ, ಶಾಲೆಯನ್ನು ಆಶ್ರಮಕ್ಕೆ ಹಸ್ತಾಂತರಿಸಬಾರದು ಎಂದು ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.