ADVERTISEMENT

ಮದ್ಯದ ಅಂಗಡಿ ಪರವಾನಗಿ ರದ್ದತಿಗೆ ಆಗ್ರಹ

ನಾಗನಹಳ್ಳಿ – ಹಿರೇಹಳ್ಳಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 16:53 IST
Last Updated 28 ಜುಲೈ 2018, 16:53 IST
ಮದ್ಯದಂಗಡಿ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಿರೇಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು
ಮದ್ಯದಂಗಡಿ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಿರೇಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು   

ಎಚ್.ಡಿ.ಕೋಟೆ: ತಾಲ್ಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಮದ್ಯದ ಅಂಗಡಿ ಆರಂಭಿಸಲು ನೀಡಿದ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ನಾಗನಹಳ್ಳಿ ಹಾಗೂ ಹಿರೇಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಶನಿವಾರ ಮತ್ತೆ ಪ್ರತಿಭಟನೆ ನಡೆಸಿದರು.

ಎರಡೂ ಗ್ರಾಮದ ಹಲವು ಸ್ತ್ರೀಶಕ್ತಿ ಸಂಘಟನೆಗಳ 200ಕ್ಕೂ ಹೆಚ್ಚು ಸದಸ್ಯೆಯರು ಮತ್ತು ನೂರಾರು ಪುರುಷರು ಜಮಾಯಿಸಿ, ಪರವಾನಗಿ ನೀಡಿದ ಅಬಕಾರಿ ಅಧಿಕಾರಿ, ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಪರವಾನಗಿ ನೀಡಿದ ಅಬಕಾರಿ ಇಲಾಖೆಯ ಡಿ.ಸಿ ಸ್ಥಳಕ್ಕೆ ಬರಬೇಕು. ನಮ್ಮ ಕಷ್ಟ ಏನೆಂದು ತಿಳಿಯಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ADVERTISEMENT

ಪ್ರತಿಭಟನಾನಿರತ ಛಾಯಾ ಮಾತನಾಡಿ, ‘ಕಳೆದ ಎರಡು ವರ್ಷಗಳಿಂದ ಇಲ್ಲಿ ಬಾರ್ ಬೇಡ ಎಂದು ಹೋರಾಟ ಮಾಡುತ್ತಿದ್ದರೆ, ಬಾರ್ ನಡೆಸಲು ಅನುಮತಿ ಕೊಟ್ಟಿರುವುದು ದುರದೃಷ್ಟಕರವಾಗಿದೆ. ಪರವಾನಗಿ ಕೊಟ್ಟ ಅಧಿಕಾರಿಗೂ, ಸಹಕಾರ ಕೊಟ್ಟ ಜನ ಪ್ರತಿನಿಧಿಗಳಿಗೆ ಬಡವರ ಕಷ್ಟ ಗೊತ್ತಿಲ್ಲ. ಇಲ್ಲಿ ಹೆಚ್ಚಿನ ಜನ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅಂಥವರಿಗೆ ಬಾರ್ ಏಕೆ ಬೇಕು? ಅದರಿಂದ ‌ಅನನುಕೂಲವೇ ಹೆಚ್ಚು, ಯಾವುದೇ ಅನಾಹುತ ನಡೆಯುವ ಮುನ್ನ ಅನುಮತಿ ರದ್ದು ಮಾಬೇಕು’ ಎಂದರು.

ಘಟನೆ ಏನು:ತಾಲ್ಲೂಕಿನ ನಾಗನಹಳ್ಳಿ ಗ್ರಾಮದಿಂದ ಅನತಿ ದೂರದಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಮದ್ಯದಂಗಡಿ ಆರಂಭಕ್ಕೆ ಅಬಕಾರಿ ಇಲಾಖೆ ಪ್ರಯತ್ನಪಡುತ್ತಿತ್ತು. ಆದರೆ ನಾಗನಹಳ್ಳಿ ಮತ್ತು ಹಿರೇಹಳ್ಳಿ ಗ್ರಾಮಸ್ಥರು, ಗ್ರಾಮದ ಸನಿಹ ಮದ್ಯದಂಗಡಿ ಬೇಡ, ಇದರಿಂದ ಜನತೆಗೆ ತೊಂದರೆ ಆಗುತ್ತದೆ. ಅಂಗಡಿ ಆರಂಭ ಮಾಡಬೇಕೆಂದಿರುವ ಸ್ಥಳದಲ್ಲಿ ದೇವಸ್ಥಾನ ಇದೆ. ಸನಿಹದಲ್ಲೇ ಶಾಲಾ ಮತ್ತು ಕಾಲೇಜು ಇದೆ.

ಇರುವ ಒಂದು ರಸ್ತೆಯಲ್ಲಿ ಮದ್ಯದಂಗಡಿ ಆರಂಭ ಆದರೆ ಶಾಲಾ ಕಾಲೇಜಿಗೆ ಬರುವ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ನಾಗನಹಳ್ಳಿ ಚರ್ಚಿನ ಧರ್ಮಗುರು ಅಂತೋಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಜನ ಪ್ರತಿನಿಧಿಗಳು ಕೂಡ ಮದ್ಯದಂಗಡಿ ಆರಂಭಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಭರವಸೆ ಕೊಟ್ಟಿದ್ದರು. ಆದರೆ ಬಾರ್ ಮಾಲೀಕರು ಸಚಿವರೊಬ್ಬರ ಸಹಕಾರ ಪಡೆದು, ಈಗ ಅಂಗಡಿ ತೆರೆದಿದ್ದಾರೆ. ಹಾಗಾಗಿ ಮತ್ತೆ ಪ್ರತಿಭಟನೆ ಶುರು ಆಗಿದೆ.

ಮದ್ಯದಂಗಡಿ ಮುಂದೆಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಗ್ರಾಮಸ್ಥರು ಪಟ್ಟಣ ಠಾಣೆಗೆ ಅನುಮತಿ ಕೇಳಿದ್ದರು. ಆದರೆ ಪೊಲಿಸರು ಅನುಮತಿ ಕೊಡಲಿಲ್ಲ. ಆದರೂ ಶನಿವಾರ ಬೆಳಿಗ್ಗೆ ಎರಡೂ ಗ್ರಾಮದ ಗ್ರಾಮಸ್ಥರು, ಅಂಗಡಿ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ಕೊಡಲಿಲ್ಲ. ಹಾಗಾಗಿ ಹಿರೇಹಳ್ಳಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲು ಮುಂದಾದರು. ಅಲ್ಲೂ ಪೋಲಿಸರು ಅವಕಾಶ ಕೊಡಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸ್ಥಳದಲ್ಲಿ ಸರಗೂರು ಪಿಎಸ್ಐ ಬಸವರಾಜು ವಾಸ್ತವ್ಯ ಹೂಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಗ್ರಾಮಸ್ಥರಾದ ಲಾಜರ್, ಆನಂದ್ ಫ್ರಾನ್ಸಿಸ್, ಉಮಾ, ನೇತ್ರಾವತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.