ADVERTISEMENT

ಮೈಸೂರು: ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪರಿಶಿಷ್ಟರು, ಒಕ್ಕಲಿಗ ಸಮಾಜದಿಂದ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:47 IST
Last Updated 14 ಸೆಪ್ಟೆಂಬರ್ 2024, 15:47 IST
ಎಂ. ಲಕ್ಷ್ಮಣ
ಎಂ. ಲಕ್ಷ್ಮಣ   

ಮೈಸೂರು: ‘ಘನ ತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ₹30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಕಿರುಕುಳ ನೀಡುತ್ತಿದ್ದಾರೆ. ಹಣ ಕೊಡದಿದ್ದರೆ ರೇಣುಕಸ್ವಾಮಿ ರೀತಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಒತ್ತಾಯಿಸಿದರು.

‘ಆ ಶಾಸಕ ಗುತ್ತಿಗೆದಾರರ ಜಾತಿನಿಂದನೆ ಮಾಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದ ಬಳಸಿದ್ದಾರೆ. ಹೀಗಾಗಿ, ಅವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಬೇಕು. ಬಿಜೆಪಿಯಿಂದ ಉಚ್ಚಾಟಿಸಬೇಕು. ಶಾಸಕ ಸ್ಥಾನದಿಂದ ಕೆಳಗಿಳಿಸಬೇಕು’ ಎಂದು ಆಗ್ರಹಿಸಿದರು.

‘ಮುನಿರತ್ನ ಅವರು ಒಕ್ಕಲಿಗ ಸಮಾಜದ ವಿರುದ್ಧವೂ ಕೆಟ್ಟದಾಗಿ ಮಾತನಾಡಿದ್ದಾರೆ. ಅದೆಲ್ಲವೂ ಆಡಿಯೊದಲ್ಲಿದೆ. ಹೀಗಾಗಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೋರಿ ಪೊಲೀಸ್ ಮಹಾನಿರ್ದೇಶಕರಿಗೂ ದೂರು ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಆ ಶಾಸಕ ಶೇ 50ರಷ್ಟು ಕಮಿಷನ್ ಕೇಳಿದ್ದಾರೆ. ಬಿಜೆಪಿಯವರ‌ ಮನಸ್ಥಿತಿ ‌ಇದು. ಎರಡು ಪ್ರಬಲ ಸಮುದಾಯಗಳನ್ನು ನಿಂದನೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ಸುಮ್ಮನೆ ಬಿಡಬಾರದು. ಈಗ ನಿರ್ಲಕ್ಷ್ಯ ವಹಿಸಿದರೆ ಮುಂದಾಗುವ ಅನಾಹುತಗಳಿಗೆ ಪೊಲೀಸರೇ ಕಾರಣ ಆಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಮುನಿರತ್ನ ವಿರುದ್ಧ ಸೋಮವಾರ (ಸೆ. 16) ಇಲ್ಲಿನ ಗಾಂಧಿ ಭವನದಲ್ಲಿ ಸ್ವಾಭಿಮಾನಿ ಒಕ್ಕಲಿಗ ಹಾಗೂ ಪರಿಶಿಷ್ಟ ಸಮುದಾಯದವರು ಸೇರಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.