ADVERTISEMENT

ಅಪ್ಪಚ್ಚ ಕವಿ ಅಧ್ಯಯನ ಪೀಠಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 3:15 IST
Last Updated 22 ಸೆಪ್ಟೆಂಬರ್ 2022, 3:15 IST
ಅಡ್ಡಂಡ ಸಿ. ಕಾರ್ಯಪ್ಪ
ಅಡ್ಡಂಡ ಸಿ. ಕಾರ್ಯಪ್ಪ   

ಮೈಸೂರು: ‘ಅಪ್ಪಚ್ಚ ಕವಿ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.

ನಗರದ ಕೊಡವ ಸಮಾಜದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಅಪ್ಪಚ್ಚ ಕವಿ ಜನ್ಮದಿನವನ್ನು ಬುಧವಾರ ಆಚರಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ‘ಅಪ್ಪಚ್ಚ ಕವಿ ಕೊಡಗಿನ ಒಬ್ಬ ದಾರ್ಶನಿಕ. ದಾಸ ಪರಂಪರೆಗೆ ನಾಂದಿ ಹಾಡಿದ ಮಹಾಕವಿ. ಅವರ ನಾಟಕಗಳು, ಕೀರ್ತನೆಗಳು, ಕಾವ್ಯಗಳು ಕನ್ನಡ ಸಾರಸ್ವತ ಲೋಕದ ಅಧ್ಯಯನಕ್ಕೆ ಅತ್ಯಂತ ಯೋಗ್ಯವಾಗಿವೆ. ಅದರ ಚರ್ಚೆ ಮತ್ತು ಅಧ್ಯಯನ ದೃಷ್ಟಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದಕ್ಕಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಪ್ಪಚ್ಚ ಕವಿ ಅಧ್ಯಯನ ಪೀಠ ರಚನೆಯಾಗಬೇಕು. ಇದಕ್ಕಾಗಿ ಸಮಾಜದವರು ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಕೋರಿದರು.

ADVERTISEMENT

‘ಭಾರತೀಯ ರಂಗಭೂಮಿಯಲ್ಲಿ ಪುರಾಣದ ಯಯಾತಿ ಕಥೆಯನ್ನು ನಾಟಕ ರೂಪದಲ್ಲಿ ತಂದ ಮೊದಲ ಭಾರತೀಯ ನಾಟಕಕಾರ ಅಪ್ಪಚ್ಚಕವಿ ಎನ್ನುವುದನ್ನು ರಂಗಭೂಮಿ ತಜ್ಞರು ಮತ್ತು ಕಲಾವಿದರು ಮರೆಯಬಾರದು’ ಎಂದರು.

‘ಕನ್ನಡ ಸಾರಸ್ವತ ಲೋಕ ಅಪ್ಪಚ್ಚ ಕವಿಯನ್ನು ಇನ್ನೂ ಸ್ವೀಕರಿಸಿಲ್ಲ. ಅವರ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆ ನಡೆಸಿಲ್ಲ. ಕೊಡವ ಭಾಷೆ ಎಂಬ ಕಾರಣಕ್ಕೆ ಹೀಗಾಗಿರಬಹುದು’ ಎಂದು ವಿಷಾದ ವ್ಯಕ್ತಪಡಿಸಿದರು.

ಭರಣಿ ಕಲಾ ಗ್ಯಾಲರಿ ಅಧ್ಯಕ್ಷ, ಕಲಾವಿದ ನೆಲ್ಲಮಕ್ಕಡ ಕಾವೇರಪ್ಪ ಅಪ್ಪಚ್ಚ ಕವಿಯ ಬದುಕು–ಬರಹದ ಬಗ್ಗೆ ಮಾತನಾಡಿದರು.

ಸಮಾಜದ ಅಧ್ಯಕ್ಷ ಮೇಚಂಡ ಶಶಿ ಪೊನ್ನಪ್ಪ ಸ್ವಾಗತಿಸಿದರು. ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್‌ನ ಅಧ್ಯಕ್ಷ ಕುಟ್ಟಿಮಾಡ ಮುತ್ತಪ್ಪ, ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.