ADVERTISEMENT

ಮೈಸೂರು: ಬಾಗಿಲು ತೆರೆಯದ ಮಳಿಗೆಗಳು

ವಾರದ ಹಿಂದೆ ಮುಖ್ಯಮಂತ್ರಿಯಿಂದ ವಸ್ತುಪ್ರದರ್ಶನ ಉದ್ಘಾಟನೆ

ಶಿವಪ್ರಸಾದ್ ರೈ
Published 22 ಅಕ್ಟೋಬರ್ 2023, 5:02 IST
Last Updated 22 ಅಕ್ಟೋಬರ್ 2023, 5:02 IST
<div class="paragraphs"><p>ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮಳಿಗೆ</p></div>

ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮಳಿಗೆ

   

-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ನಾಡಹಬ್ಬ ಆರಂಭವಾಗಿ ವಾರ ಕಳೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿದೇಶದಿಂದಲೂ ಜನ ನಗರಕ್ಕೆ ಬರುತ್ತಿದ್ದಾರೆ. ಆದರೆ, ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಸ್ತುಪ್ರದರ್ಶನದ ಮೈದಾನದಲ್ಲಿ ವಿವಿಧ ಇಲಾಖೆಗಳ, ನಿಗಮಗಳ ಮಾಹಿತಿ ನೀಡುವ ಮಳಿಗೆಗಳು ಇನ್ನೂ ತಯಾರಿಯ ಹಂತದಲ್ಲೇ ಇವೆ.

ADVERTISEMENT

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಡಾ.ಬಿ.ಆರ್.ಅಂಬೇಡ್ಕರ್‌ ನಿಗಮ, ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಮಳಿಗೆಗಳು ತಯಾರಿ ಹಂತದಲ್ಲಿವೆ.

ದಸರಾ ಆರಂಭದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸ್ತುಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮಳಿಗೆಗಳಿಗೆ ಭೇಟಿ ನೀಡಿದ್ದರು. ವಾರ್ತಾ ಇಲಾಖೆಯು ‘ಪಂಚಭಾಗ್ಯ’ಗಳ ಕುರಿತು ನೀಡಿದ್ದ ಮಾಹಿತಿಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು.

ಇಲಾಖೆಗಳ 38 ಮಳಿಗೆಗಳನ್ನೂ ಮೊದಲ ದಿನದಿಂದಲೇ ಆರಂಭಿಸಲು ಪ್ರಾಧಿಕಾರ ಯೋಜನೆ ರೂಪಿಸಿತ್ತು. ಸಮಾಜ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ, ನೀರಾವರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಇಂಧನ, ವಸತಿ ಶಿಕ್ಷಣ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಕೈಮಗ್ಗ ಜವಳಿ ಇಲಾಖೆ ಹೀಗೆ ಪ್ರಮುಖ ಇಲಾಖೆಗಳಷ್ಟೇ ಅಂದು ತೆರೆದಿತ್ತು. ಪೂರ್ಣಗೊಂಡ ಮಳಿಗೆಗೆ ಮಾತ್ರ ಅತಿಥಿಗಳನ್ನು ಕರೆದುಕೊಂಡು ಹೋಗಿ ವಿವರಣೆ ನೀಡಲಾಗಿತ್ತು.

ಸುಮಾರು 15ರಷ್ಟು ಮಳಿಗೆಗಳಷ್ಟೇ ಪೂರ್ಣಗೊಂಡಿದ್ದು, ಉಳಿದವು ನಿರ್ಮಾಣದ ಹಂತದಲ್ಲಿವೆ. ಇಲಾಖೆಗಳು ನಿರ್ಮಿಸಿರುವ ಸುಂದರ ಮಳಿಗೆಗಳನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ನಿರ್ಮಾಣ ಹಂತದಲ್ಲಿರುವ ಮಳಿಗೆ ಕಂಡು ಮರಳುತ್ತಿದ್ದಾರೆ.

ಮಂಗಳವಾರ ಜಂಬೂಸವಾರಿಯ ವೈಭವವೂ ಮುಗಿದು ದಸರಾಕ್ಕೆ ತೆರೆ ಬೀಳಲಿದೆ. ಇನ್ನೂ ಇಲಾಖೆಯ ಮಳಿಗೆಗಳು ನಿರ್ಮಾಣ ಹಂತದಲ್ಲಿರುವುದರಿಂದ ಜನರಿಗೆ ಮಾಹಿತಿ ತಲುಪಿಸಬೇಕೆಂಬ ಸರ್ಕಾರದ ಮೂಲ ಉದ್ದೇಶಕ್ಕೆ ಹೊಡೆತ ಬೀಳಲಿದೆ.

ಈ ಬಗ್ಗೆ ಮಾಹಿತಿ ಪಡೆಯಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಮುಖ್ಯಸ್ಥರನ್ನು ಅವರು ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ಲಭ್ಯವಾಗಿಲ್ಲ.

ನಿರ್ಮಾಣ ಹಂತದಲ್ಲಿರುವ ಮಳಿಗೆ

ನಿರ್ಮಾಣ ಸ್ಥಿತಿಯಲ್ಲಿ ಇಲಾಖೆ ಮಳಿಗೆ ನಿರಾಸೆಯಿಂದ ತೆರಳುತ್ತಿರುವ ಪ್ರವಾಸಿಗರು

ದಸರಾ ವಸ್ತುಪ್ರದರ್ಶನ ಚೆನ್ನಾಗಿದೆ. ಆದರೆ ಕೆಲವೊಂದು ಮಳಿಗೆಗಳು ಇನ್ನೂ ನಿರ್ಮಾಣ ಹಂತದಲ್ಲಿದ್ದು ಪ್ರದರ್ಶನ ನೋಡುವುದೂ ಅಪೂರ್ಣವಾದಂತೆ ಭಾಸವಾಗುತ್ತಿದೆ.

-ಪ್ರವೀಣ್‌ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.