ಕೆ.ಆರ್.ನಗರ: ‘ಇಲ್ಲಿನ ರೇಡಿಯೊ ಮೈದಾನದಲ್ಲಿ ಮೇ 23ರಂದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ಅವಳಿ ತಾಲ್ಲೂಕುಗಳಿಗೆ ತರಲಾದ ಸುಮಾರು ₹400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ₹2.25 ಕೋಟಿ ಮೊತ್ತದ ವಿವಿಧ ರಸ್ತೆ, ಚರಂಡಿ ಅಭಿವೃದ್ಧಿಗೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲ್ಲೂಕಿನ ಅಭಿವೃದ್ಧಿಗೆ ಎರಡು ವರ್ಷಗಳ ಅವಧಿಯಲ್ಲಿ ₹700 ಕೋಟಿಗೂ ಅಧಿಕ ಅನುದಾನ ತರಲಾಗಿದೆ. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಮೃತ 2.0 ಯೋಜನೆಯಡಿ ₹30 ಕೋಟಿ, ಒಳಚರಂಡಿ ಯೋಜನೆಗೆ ₹20 ಕೋಟಿ, ಸಾರ್ವಜನಿಕ ಆಸ್ಪತ್ರೆ ಅಭಿವೃದ್ಧಿಗೆ ₹1 ಕೋಟಿ, ಶ್ರೀಕೃಷ್ಣರಾಜೇಂದ್ರ ಕ್ರೀಡಾಂಗಣದ ಅಭಿವೃದ್ಧಿಗೆ ₹2 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.
‘ನಿರಾಣಿ ಶುಗರ್ಸ್‌ನವರಿಗೆ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ನೋಂದಣಿ ಮಾಡಿಸಿಕೊಳ್ಳಲಾಗಿದೆ. ಅದರಂತೆ ಕಾರ್ಖಾನೆ ಶೀಘ್ರ ಪ್ರಾರಂಭವಾಗಲಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ನಿರಾಣಿ ಅವರೊಂದಿಗೆ ಚರ್ಚಿಸಿದ್ದೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಸಾಲಿಗ್ರಾಮ ಪಟ್ಟಣವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ತಾಲ್ಲೂಕಿನ ಗಂಧನಹಳ್ಳಿಗೂ ತರುವ ಪ್ರಯತ್ನ ಮಾಡಲಾಗಿದೆ’ ಎಂದರು.
‘ತಾಲ್ಲೂಕಿನ ಗಂಧನಹಳ್ಳಿ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಈ ಗ್ರಾಮಕ್ಕೆ ಎಷ್ಟೇ ಅನುದಾನ ತಂದರೂ ಸಾಕಾಗುವುದಿಲ್ಲ. ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ’ ಎಂದರು.
ಇದಕ್ಕೂ ಮುನ್ನ ತಾಲ್ಲೂಕಿನ ಬಾಲೂರು ಗ್ರಾಮದಲ್ಲಿ ₹15 ಲಕ್ಷ ಮೊತ್ತದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಮುಖಂಡರಾದ ವೆಂಕಟೇಶ್, ಹೇಮಂತ್, ಶಿವಣ್ಣ, ಜಿ.ಎಸ್.ಮಂಜುನಾಥ್, ಮಹದೇವಿ ಬಲರಾಮ್, ಜಿ.ಆರ್.ಸತೀಶ್, ದೇವೇಂದ್ರ, ಕೆಂಪರಾಜು, ಲೋಕೇಶ್, ದೇವೇಂದ್ರ, ಪ್ರೇಮಾ ಶಿವಣ್ಣ, ಜಿ.ಕೆ.ಮಹದೇವ್, ಗಂಧನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್, ಕುಮಾರ್, ಲಕ್ಕೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.