ಮೈಸೂರು: ‘ಭಾರತದಲ್ಲಿ ಬುದ್ಧಿಸಂ ಎಂಬ ಮಹಾನದಿಯನ್ನು ಶರಣ ಪಂಥ, ಸೂಫಿಸಂ, ಕಬೀರ್ ಪಂಥ, ನಾಥ ಪಂಥಗಳೆಂಬ ಅನೇಕ ಪರಂಪರೆಗಳು ಬೇರೆ ಬೇರೆ ರೂಪದಲ್ಲಿ ಜೀವಂತವಾಗಿರಿಸಿವೆ’ ಎಂದು ಪ್ರೊ.ರಹಮತ್ ತರೀಕೆರೆ ಹೇಳಿದರು.
ನಗರದ ಮಾನಸಗಂಗೋತ್ರಿಯ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ನಡೆದ 69ನೇ ಧಮ್ಮ ದೀಕ್ಷಾ ದಿನಾಚರಣೆಯಲ್ಲಿ ಭಾರತೀಯ ಪರಂಪರೆಯಲ್ಲಿ ಬೌದ್ಧ ತಾತ್ವಿಕತೆ ವಿಶೇಷ ಉಪನ್ಯಾಸ ನೀಡಿದರು.
‘ಬುದ್ಧಿಸಂನ ಮೂಲ ರೂಪ ಕಾಣದಿದ್ದರೂ ಅದರ ಸಾರವನ್ನು ಇಲ್ಲಿ ಕಾಣಬಹುದು. ಬುದ್ಧಿಸಂ ಬಿಟ್ಟು ಕಬೀರರನ್ನು ಅರ್ಥ ಮಾಡಿಕೊಳ್ಳಲಾಗದು. ಪಂಚಶೀಲ ತತ್ವಕ್ಕೂ ಶರಣರ ತತ್ವಕ್ಕೂ ಸಾಮ್ಯತೆಯಿದೆ. ಬುದ್ಧ ಬಲವಂತವಾಗಿ ತನ್ನ ತತ್ವ, ಸಿದ್ದಾಂತ ಹೇರಲಿಲ್ಲ. ಬೇಕಾದರೆ ಅನುಸರಿಸುವ ಸ್ವಾತಂತ್ರ್ಯ ನೀಡಿದನು. ಶಿಷ್ಯರಿಗೆ ಇಷ್ಟೊಂದು ಸ್ವಾತಂತ್ರ್ಯವನ್ನು ಯಾವ ಗುರುಪಂಪರೆಯೂ ನೀಡಿಲ್ಲ’ ಎಂದರು.
‘ಭಾರತದಲ್ಲಿ ಬೇರೆ ಬೇರೆ ತತ್ವಶಾಸ್ತ್ರ ಶಾಲೆಗಳಲ್ಲಿ ಬೌದ್ಧ ಧರ್ಮವನ್ನು ಎದುರಾಳಿ ಎಂದು ಭಾವಿಸುವ ಮೂಲಕ ಬೌದ್ಧರನ್ನು ದುಷ್ಟರನ್ನಾಗಿ ತೋರಿಸುತ್ತಿದ್ದರು. ಬೌದ್ಧರ ಫಿಲಾಸಫಿಗಳು ಸೋಲುವ ನೂರಾರು ಕಥನಗಳು ಬಂದಿವೆ. ಅನೇಕ ಬೌದ್ಧ ಬಿಕ್ಕುಗಳನ್ನು, ತತ್ವಜ್ಞಾನಿಗಳನ್ನು ಕೊಂದ ದೀರ್ಘ ಪರಂಪರೆಯೂ ಇದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, ಜೈನ ಕವಿ ಪಂಪನ ಆದಿಪುರಾಣದಲ್ಲಿ, ಮೈಸೂರು ಆಸ್ಥಾನದ ಕೆಂಪು ನಾರಾಯಣ ಕವಿಯ ಮುದ್ರಾ ಮಂಜೂಷಾ ಕೃತಿಯಲ್ಲಿ ಈ ವಿರೋಧವನ್ನು ಕಾಣಬಹುದು’ ಎಂದರು.
ಮಹಾಬೋಧಿ ಸಂಸ್ಥೆಯ ಬಿಕ್ಕು ಜಿನವಂಶ, ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಎಂ.ಡ್ಯಾನಿಯಲ್, ವಿಭಾಗದ ಪ್ರೊ.ಕೆ.ನಾಗಣ್ಣ, ಪ್ರೊ.ಎಚ್.ಎಂ.ಮಲ್ಲಿಕಾರ್ಜುನ, ಕೇಂದ್ರದ ಪ್ರೊ.ಎಸ್.ನರೇಂದ್ರಕುಮಾರ್, ಪ್ರೊ.ಜೆಸೋಮಶೇಖರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.