ADVERTISEMENT

ಸಿಂಥೆಟಿಕ್‌ನಿಂದ ಮಾಡಿದ ರಾಷ್ಟ್ರಧ್ವಜಗಳ ಬಳಕೆಗೆ ಖಂಡನೆ: ಕುಂಚದಲ್ಲಿ ಪ್ರತಿರೋಧ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 4:11 IST
Last Updated 30 ಜುಲೈ 2022, 4:11 IST
ಗೋಕುಲಂನ ’ಶ್ಯಾಗಲೆ ಹೌಸ್‌ನಲ್ಲಿ ಶುಕ್ರವಾರ ಆರಂಭವಾದ ಧ್ವಜ ಸತ್ಯಾಗ್ರಹದಲ್ಲಿ ಕಲಾವಿದರು, ರಂಗಕರ್ಮಿಗಳು ರಚಿಸಿದ ಕಲಾಕೃತಿಗಳನ್ನು ನಾಗರಿಕರು ವೀಕ್ಷಿಸಿದರು. ಕಲಾವಿದ ದ್ವಾರಕನಾಥ್‌, ರಂಗಕರ್ಮಿ ಪ್ರಸನ್ನ, ನಾಗರಿಕ ಸಮಿತಿ ಸಂಚಾಲಕ ಕಾಳಚನ್ನೇಗೌಡ ಇದ್ದರು .
ಗೋಕುಲಂನ ’ಶ್ಯಾಗಲೆ ಹೌಸ್‌ನಲ್ಲಿ ಶುಕ್ರವಾರ ಆರಂಭವಾದ ಧ್ವಜ ಸತ್ಯಾಗ್ರಹದಲ್ಲಿ ಕಲಾವಿದರು, ರಂಗಕರ್ಮಿಗಳು ರಚಿಸಿದ ಕಲಾಕೃತಿಗಳನ್ನು ನಾಗರಿಕರು ವೀಕ್ಷಿಸಿದರು. ಕಲಾವಿದ ದ್ವಾರಕನಾಥ್‌, ರಂಗಕರ್ಮಿ ಪ್ರಸನ್ನ, ನಾಗರಿಕ ಸಮಿತಿ ಸಂಚಾಲಕ ಕಾಳಚನ್ನೇಗೌಡ ಇದ್ದರು .   

ಮೈಸೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯಲ್ಲಿ ಸಿಂಥೆಟಿಕ್‌ನಿಂದ ಮಾಡಿದ ರಾಷ್ಟ್ರಧ್ವಜಗಳ ಬಳಕೆ ವಿರೋಧಿಸಿ ‘ನಾಗರಿಕ ಸಮಿತಿ’ಯು ಗೋಕುಲಂನ ಶ್ಯಾಗಲೆ ಹೌಸ್‌ನಲ್ಲಿ ಶುಕ್ರವಾರ ಧ್ವಜ ಸತ್ಯಾಗ್ರಹ ಆರಂಭಿಸಿತು.

ರಂಗಾಯಣದ ಕಲಾವಿದ ದ್ವಾರಕನಾಥ್‌ ನೇತೃತ್ವದಲ್ಲಿ ನಡೆದ ಕಲಾಶಿಬಿರದಲ್ಲಿಹತ್ತಾರು ಕಲಾವಿದರು, ವಿದ್ಯಾರ್ಥಿಗಳು, ರಂಗಕರ್ಮಿಗಳು ಪಾಲ್ಗೊಂಡು ಕಲಾಕೃತಿಗಳನ್ನು ರಚಿಸಿ ಸರ್ಕಾರದ ನೀತಿಯ ವಿರುದ್ಧ ಕುಂಚದಲ್ಲೇ ವಿರೋಧ ದಾಖಲಿಸಿದರು.

ಶ್ರಮ ಸಂಸ್ಕೃತಿ, ಶಿವಪುರ ಧ್ವಜ ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟದ ಚಿತ್ರಗಳು ಆಕರ್ಷಿಸಿದ್ದವಲ್ಲದೆ, ಕಲಾಪ್ರಕಾರವು ಸ್ವಾತಂತ್ರ್ಯಪೂರ್ವಕ್ಕೆ ಮರಳುವಂತಿತ್ತು.

ADVERTISEMENT

ಕಲಾವಿದ ದ್ವಾರ್ಕಿ ಮಾತನಾಡಿ, ‘ಸ್ವಾತಂತ್ರ ಹೋರಾಟದಲ್ಲಿ ಎಲ್ಲ ವರ್ಗದವರು ಭಾಗವಹಿಸಿದ್ದರು. ಶ್ರಮಜೀವಿಗಳ ಹೋರಾಟವನ್ನು ಶಿಬಿರದಲ್ಲಿ ಭಾಗವಹಿಸಿದ್ದವರು ಚಿತ್ರಿಸಿದ್ದಾರೆ. ಕುಂಬಾರರು, ನೇಕಾರರು, ಹೂ ಕಟ್ಟುವವರು, ಮರಗೆಲಸ ಮಾಡುವವರು, ಕಮ್ಮಾರರು ಸೇರಿದಂತೆ ಶ್ರಮಿಕರು ಕಲಾಕೃತಿಗಳಲ್ಲಿ ಇದ್ದಾರೆ’ ಎಂದರು.

ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಖಾದಿ ಧ್ವಜಗಳನ್ನೇ ಹಾರಿಸುವ ಮೂಲಕ ಸರ್ಕಾರದ ನೀತಿ ತಪ್ಪಿದೆಯೆಂದು ಬಡವರು, ರೈತರು, ಶ್ರಮಿಕರ ಪರವಾಗಿರುವ ಎಲ್ಲ ನಾಗರಿಕರು, ಸರ್ಕಾರಿ ನೌಕರರು ಹೇಳಬೇಕು. ಈ ಬಗ್ಗೆ ಅರಿವು ಮೂಡಿಸುವುದಕ್ಕಾಗಿಯೇ ಶಿಬಿರ ನಡೆದಿದೆ’ ಎಂದು ಪ್ರತಿಕ್ರಿಯಿಸಿದರು.

ನೂರಾರು ಮಂದಿ ಕಲಾಕೃತಿಗಳನ್ನು ವೀಕ್ಷಿಸಿದರು.ನಾಗರಿಕ ಸಮಿತಿ ಸಂಚಾಲಕರಾದ ಕಾಳಚನ್ನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.