ADVERTISEMENT

ಹೈಕೋರ್ಟ್‌ಗೆ ಮೇಲ್ಮನವಿ ಸಿದ್ಧತೆ ಕೈಬಿಡಿ

ಕುರುಬಾರಹಳ್ಳಿಯ ಬಿ ಖರಾಬು ಬಿಜೆಪಿ ಸೃಷ್ಟಿಸಿದ ಕೂಸು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 15:22 IST
Last Updated 21 ಜುಲೈ 2020, 15:22 IST

ಮೈಸೂರು: ‘ಬಿಜೆಪಿ ಮುಖಂಡ ಗೋ.ಮಧುಸೂದನ್‌ ಒತ್ತಾಯದ ಮೇರೆಗೆ ಕುರುಬಾರಹಳ್ಳಿ ಸರ್ವೆ ನಂಬರ್‌ 4ರ ವ್ಯಾಪ್ತಿಯ ಜಮೀನನ್ನು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರೇ ಬಿ ಖರಾಬು ಎಂದು ಘೋಷಿಸಿದ್ದು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

‘ಬಿಜೆಪಿಯವರಿಗೆ ಕುರುಬಾರಹಳ್ಳಿಯ ಸರ್ವೆ ನಂಬರಿನ ವಿವಾದ ಬಗೆಹರಿಸುವುದು ಬೇಕಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ನಾಟಕವಾಡುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಇದೇ ವಿಷಯ ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಕಂದಾಯ ಸಚಿವ ಆರ್.ಅಶೋಕ್ ಮೈಸೂರಿಗೆ ಬಂದು ಹಸಿ ಸುಳ್ಳಿನ ಹೇಳಿಕೆ ನೀಡಿದ್ದಾರೆ. ಜನರ ದಿಕ್ಕು ತಪ್ಪಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಹೈಕೋರ್ಟ್‌ ತೀರ್ಪಿನ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದಾರೆ. ಮುಂದಿನ ವಾರ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದ್ದು, ಸಿದ್ಧಾರ್ಥ ನಗರ, ಕೆಸಿ ನಗರ, ಜಿ.ಸಿ.ಬಡಾವಣೆಯ ಜನರಿಗೆ ಸಂಕಷ್ಟ ತಪ್ಪದು’ ಎಂದು ಹೇಳಿದರು.

ADVERTISEMENT

‘ಹೈಕೋರ್ಟ್‌ನ ತೀರ್ಪು ಅರ್ಜಿ ಸಲ್ಲಿಸಿದ್ದ ಆರು ಜನರಿಗೆ ಅನ್ವಯವಾಗಲಿದೆ. ಇದು ಎಲ್ಲರಿಗೂ ಅನ್ವಯವಾಗಲ್ಲ. ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ಬಿ ಖರಾಬಿನ ಪರವೇ ವಾದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ನಮ್ಮಲ್ಲಿವೆ. ಸಿದ್ದರಾಮಯ್ಯ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಜನವಸತಿ ಬಡಾವಣೆಯ 354 ಎಕರೆ ಪ್ರದೇಶವನ್ನು ಬೇರ್ಪಡಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡಿಲ್ಲ. ನಗರಾಭಿವೃದ್ಧಿ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಿದೆಯಷ್ಟೇ’ ಎಂದು ಲಕ್ಷ್ಮಣ್ ಆರೋಪಿಸಿದರು.

‘ಸಚಿವ ಅಶೋಕ್ ನೀಡಿದ ಸುಳ್ಳು ನಡಾವಳಿ ಪತ್ರ ನಂಬಬೇಡಿ. ಮೂರು ಬಡಾವಣೆಯ ಜನರು ಮೊದಲು ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿ. ಕಾಂಗ್ರೆಸ್‌ ಸಹ ನಿಮ್ಮ ಪರ ಕಾನೂನು ಹೋರಾಟದಲ್ಲಿ ಭಾಗಿಯಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.