ADVERTISEMENT

ನಾಯಕತ್ವ ಬದಲಾವಣೆ ಚರ್ಚೆ ಸಲ್ಲ: ಸಚಿವ ಬಿ.ಸಿ.ಪಾಟೀಲ

ಅರುಣ್‌ ಸಿಂಗ್‌ರಿಂದ ಭಿನ್ನಾಭಿಪ್ರಾಯ ಶಮನದ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 5:42 IST
Last Updated 17 ಜೂನ್ 2021, 5:42 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಮೈಸೂರು: ‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಅಲ್ಲ. ಮೊದಲು, ಕೋವಿಡ್‌ ನಿರ್ವಹಣೆಗೆ ಆದ್ಯತೆ ಕಲ್ಪಿಸಬೇಕು. ಆ ಬಳಿಕ ರಾಜಕೀಯ ಮಾಡೋಣ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗೆ ಇದ್ದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ‌ ಸೊಸೆ ಬಂದ ಬಳಿಕ ಆಕೆ ಮನೆ ಮಗಳು ಇದ್ದಂತೆ. ಐದೂ ಬೆರಳುಗಳು ಸಮನಾಗಿ ಇರುವುದಿಲ್ಲ. ಮನೆಯಲ್ಲಿ‌ ಅಣ್ಣತಮ್ಮಂದಿರ ನಡುವೆಯೇ ವ್ಯತ್ಯಾಸ ಇರುತ್ತದೆ. ಅದೇ ರೀತಿ ಪಕ್ಷದೊಳಗೆ ಟೀಕೆ, ಟಿಪ್ಪಣಿಗಳು ಸಹಜ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಎಲ್ಲ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲಿದ್ದಾರೆ’ ಎಂದರು.

‘ಸಿ.ಪಿ.ಯೋಗೇಶ್ವರ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ. ತೋಚಿದಂತೆ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರ ಸಹಿ ಸಂಗ್ರಹ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿ, ‘ಸಹಿ ಸಂಗ್ರಹ ಅಭಿಯಾನ ಸರಿಯಲ್ಲ. ಈ
ಕುರಿತು ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಏನೇ ಗೊಂದಲಗಳು ಇದ್ದರೂ, ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ– ಬೀದಿಯಲ್ಲಿ ಚರ್ಚೆ ನಡೆಸಬಾರದು. ಬಾಂಬೆ ಟೀಮ್ ಎಂಬುದು ಈ ಹಿಂದೆ ಇತ್ತು, ಈಗ ಇಲ್ಲ. ಎಲ್ಲರೂ ಜತೆಯಾಗಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.