ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಫರ್ಧಿಸಬೇಕು ಎಂದು ತಾಲ್ಲೂಕಿನ ದೊಡ್ಡಹುಂಡಿ ಗ್ರಾಮಸ್ಥರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಗುರುವಾರ ಭೇಟಿಯಾಗಿ ಒತ್ತಾಯಿಸಿದರು.
‘ನೀವು ಸ್ಪರ್ಧಿಸಿದರೆ ಗೆಲ್ಲಿಸಲು ಶ್ರಮಿಸುತ್ತೇವೆ. ನೀವು ಕಣಕ್ಕಿಳಿಯದಿದ್ದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನಾದರೂ ಸ್ಪರ್ಧೆಗಿಳಿಸಿ’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಚಾಮುಂಡೇಶ್ವರಿ ಕ್ಷೇತ್ರದ ಋಣ ನನ್ನ ಮೇಲೆ ಇದೆ. ಆದರೆ ನನ್ನನ್ನು ಸೋಲಿಸಿದ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿಯುವುದಿಲ್ಲ. ಹೈಕಮಾಂಡ್ ಒಪ್ಪಿದರೆ ಈ ಬಾರಿ ಕೋಲಾರದಿಂದ ಸ್ಪರ್ಧಿಸುತ್ತೇನೆ. ಯತೀಂದ್ರ ವರುಣಾದಿಂದ ಸ್ಪರ್ಧಿಸುತ್ತಿದ್ದಾರೆ’ ಎಂದರು.
‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ನಾನೇ ಅಭ್ಯರ್ಥಿ ಎಂದು ತಿಳಿದು, ಕಾಂಗ್ರೆಸ್ ಅಭ್ಯರ್ಥಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಿಸಬೇಕು. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ಚಾಮುಂಡೇಶ್ವರಿ ಕ್ಷೇತ್ರದ ಉಳಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡೋಣ’ ಎಂದು ಹೇಳಿದರು.
ಮುಖಂಡರಾದ ಪುಟ್ಟಬಸವೇಗೌಡ, ಸೋಮಣ್ಣ, ಗೌಡಿಕೆ ಚಿಕ್ಕೇಗೌಡ, ಮಾಲೇಗೌಡ, ಡಿ.ಸಿ.ಬಸವೇಗೌಡ, ಪೋಸ್ಟ್ ಬಸವರಾಜಪ್ಪ, ಸಿ.ಚಿಕ್ಕಣ್ಣ, ಎನ್. ಚಿಕ್ಕೇಗೌಡ, ಅಂಗಡಿ ನಾಗರಾಜು, ಚಿಕ್ಕೇಗೌಡ, ಕ್ಲಬ್ ಮಹಾದೇವು, ಎಂ.ಎತ್ತೇಗೌಡ, ಮರಣ ಬಸಪ್ಪ, ಸಿ.ನಾಗೇಂದ್ರ, ಡಿ.ಬಸವರಾಜು, ಡೈರಿ ಬಸಪ್ಪ, ಕೆ.ಬಸವೇಗೌಡ, ಪಿ.ನಾಗೇಗೌಡ, ಕೆರೆಹುಂಡಿ ಕನಕೇಗೌಡ, ಬಸವಲಿಂಗು, ಮಹಾದೇವಸ್ವಾಮಿ, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.