ADVERTISEMENT

5 ನಾಯಿ ಸಾವು; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 20:35 IST
Last Updated 12 ಜೂನ್ 2020, 20:35 IST
ರಾಮಕೃಷ್ಣನಗರದಲ್ಲಿ ಸತ್ತ ನಾಯಿಯನ್ನು ಪೀಪಲ್ಸ್ ಫಾರ್ ಎನಿಮಲ್ ಸಂಸ್ಥೆಯ ಸಿಬ್ಬಂದಿ ತೆಗೆಯುತ್ತಿರುವುದು
ರಾಮಕೃಷ್ಣನಗರದಲ್ಲಿ ಸತ್ತ ನಾಯಿಯನ್ನು ಪೀಪಲ್ಸ್ ಫಾರ್ ಎನಿಮಲ್ ಸಂಸ್ಥೆಯ ಸಿಬ್ಬಂದಿ ತೆಗೆಯುತ್ತಿರುವುದು   

ಮೈಸೂರು: ಇಲ್ಲಿನ ಟಿ.ಕೆ.ಬಡಾವಣೆಯಲ್ಲಿ ಕಳೆದ 3 ದಿನಗಳಲ್ಲಿ 5 ನಾಯಿಗಳ ಮೃತದೇಹಗಳು ಪತ್ತೆಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥೆ ಶುಕ್ರವಾರ ಪ್ರಕರಣ ದಾಖಲಿಸಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ಪಾಲಿಕೆಯ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.‌

‘ಮುಡಾ’ಗೆ ಸೇರಿದ ಖಾಲಿ ಪ್ರದೇಶದಲ್ಲಿ ರಾತ್ರಿ ವೇಳೆ ಪೋಲಿ, ಪುಂಡರ ಹಾವಳಿ ಹೆಚ್ಚಿತ್ತು. ಇಲ್ಲಿಗೆ ಬರುವ ಪುಂಡರನ್ನು ಈ ನಾಯಿಗಳು ಅಟ್ಟಾಡಿಸುತ್ತಿದ್ದವು. ಇದರಿಂದ ಕೋಪಗೊಂಡ ಅವರು ನಾಯಿಗಳಿಗೆ ವಿಷ ಹಾಕಿದ ಆಹಾರ ನೀಡಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

ADVERTISEMENT

2 ನಾಯಿಗಳಿಗೆ ಚಿಕಿತ್ಸೆ ನಡೆಯುತ್ತಿದೆ. ನಿವಾಸಿಗಳು ಹೇಳುವ ಪ್ರಕಾರ ನಿತ್ಯ ಬರುತ್ತಿದ್ದ ಸಾಕಷ್ಟು ನಾಯಿಗಳು ಕಾಣಿಸುತ್ತಿಲ್ಲ. ಹೀಗಾಗಿ, ಹೆಚ್ಚು ನಾಯಿಗಳು ಸಾವಿಗೀಡಾಗಿರುವ ಶಂಕೆ ಇದೆ ಎಂದು ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ನಾಗಭೂಷಣ್ ಹೇಳಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಪಶುವೈದ್ಯಕೀಯ ವಿಭಾಗದ ಸಹಾಯಕ ನಿರ್ದೇಶಕ ಡಾ.ತಿರುಮಲಗೌಡ, ‘ನಾಯಿಗಳಿಗೆ ಪುಂಡರು ವಿಷ ಹಾಕಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮೇಲ್ನೋಟಕ್ಕೆ ನಾಯಿಗಳಿಗೆ ಯಾವುದೇ ಕಾಯಿಲೆ ಇದ್ದಂತೆ ಕಂಡು ಬಂದಿಲ್ಲ. ಪ್ರಯೋಗಾಲಯದ ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ. ನಾಯಿಗಳ ಸಾವಿನ ಕುರಿತು ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.